ಕುಂದಾಪುರ| ಸಿಐಟಿಯು ಉಡುಪಿ ಜಿಲ್ಲಾ ಸಮ್ಮೇಳನ ಸಮಾರೋಪ

ಕುಂದಾಪುರ, ಸೆ.16: ಉಡುಪಿ ಜಿಲ್ಲಾ ಸಿಐಟಿಯು ವತಿಯಿಂದ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಕಾಂ.ದಾಸ ಭಂಡಾರಿ ವೇದಿಕೆ, ಸೂರ ದೇವಾಡಿಗ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ಸಿಐಟಿಯು ಉಡುಪಿ ಜಿಲ್ಲಾ ಸಮ್ಮೇಳನ ಸೋಮವಾರ ಸಮಾಪ್ತಿಗೊಂಡಿತು.
ಸಮ್ಮೇಳನವು ಬ್ರಹ್ಮಾವರದಲ್ಲಿ ಮಂಜೂರಾದ ಇಎಸ್‌ಐ ಆಸ್ಪತ್ರೆ ಶೀಘ್ರ ಆರಂಭಿಸಲು, ಆವೆ ಮಣ್ಣು, ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸಲು, ಇಎಸ್‌ಐ ಸಮಸ್ಯೆ ಪರಿಹರಿಸಲು, ಅಕ್ಷರ ದಾಸೋಹ ನೌಕರರಿಗೆ ಇಡುಗಂಟು ಜಾರಿಗಾಗಿ, ಅಂಗನವಾಡಿ ನೌಕರರಿಗೆ ಗ್ರಾಜ್ಯುಟಿಗಾಗಿ, ಬೀಡಿ ಕಾರ್ಮಿಕರ ಕನಿಷ್ಠ ಕೂಲಿ, ತುಟ್ಟಿಭತ್ಯೆ ನೀಡಲು, ಕಟ್ಟಡ ಕಾರ್ಮಿಕರ ಪಿಂಚಣಿ ಸಮಸ್ಯೆ, ಶೈಕ್ಷಣಿಕ ಧನಸಹಾಯ ಸಮಸ್ಯೆ ಬಗೆಹರಿಸಲು, 1996 ಕಾನೂನು ಉಳಿ ಸಲು, ಜಿಲ್ಲೆಯಲ್ಲಿ ಸರಕಾರಿ ಸ್ವಾಮ್ಯದ ಕೈಗಾರಿಕೆಗಳ ಸ್ಥಾಪನೆಗಾಗಿ ದುಡಿಯುವ ವರ್ಗದ ಹಕ್ಕುಗಳ ರಕ್ಷಣೆಗಾಗಿ ಆಗ್ರಹಿಸಿ ಸಮ್ಮೇಳನ ನಿರ್ಣಯಗಳನ್ನು ಮಂಡಿಸಲಾಯಿತು. ಅ.13ರಂದು ಜಿಲ್ಲೆಯಾದ್ಯಂತ ಹೋರಾಟ ನಡೆಸಲು ಸಮ್ಮೇಳನ ಕರೆ ನೀಡಿತು.
ವರದಿ ಲೆಕ್ಕಪತ್ರ ಮೇಲೆ ಪ್ರತಿನಿಧಿಗಳು ಚರ್ಚೆ ನಡೆಸಿ ಕೆಲವು ತಿದ್ದುಪಡಿಗಳೊಂದಿಗೆ ಅಂಗೀಕರಿಸಿದರು. ಸಿಐಟಿಯು ಜಿಲ್ಲಾ ಸಮಿತಿಗೆ ನೂತನ 16 ಮಂದಿ ಪದಾಧಿಕಾರಿಗಳನ್ನೊಳಗೊಂಡ 42 ಮಂದಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಶಿಧರ ಗೊಲ್ಲ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ವಿ., ಕೋಶಾಧಿಕಾರಿಯಾಗಿ ಕವಿರಾಜ್ ಎಸ್.ಕಾಂಚನ್ ಸರ್ವಾನುಮತದಿಂದ ಆಯ್ಕೆಯಾದರು.
ಸಿಐಟಿಯು ಜಿಲ್ಲಾ ಉಸ್ತುವಾರಿ ಮಹಾಂತೇಶ್, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದರು. ಚಂದ್ರಶೇಖರ ವಿ. ವಂದಿಸಿದರು.







