ಉಡುಪಿ: ವಿಶ್ವಕರ್ಮ ಜಯಂತಿ ಆಚರಣೆ

ಉಡುಪಿ, ಸೆ.17: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವತಿಯಿಂದ ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ವಿಶ್ವಕರ್ಮ ಜಯಂತಿ-2025ನ್ನು ಆಯೋಜಿಸಲಾಗಿತ್ತು.
ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವಿಶ್ವಕರ್ಮ ಜಯಂತಿ -2025ನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ ತಮ್ಮ ಕೈಚಳಕದ ಮೂಲಕವೇ ಎಲ್ಲವನ್ನೂ ನಿರ್ಮಾಣ ಮಾಡಿದ ವಿಶ್ವಕರ್ಮರ ಜಯಂತಿ ಯನ್ನು ಆಚರಿಸಿ ಮುಂದಿನ ಪೀಳಿಗೆಗೆ ಅವರ ಜ್ಞಾನವನ್ನು ದಾಟಿಸುವ ಉದ್ದೇಶ ಈ ಕಾರ್ಯಕ್ರಮದಲ್ಲಿದೆ ಎಂದರು.
ಕೇಂದ್ರ ಸರಕಾರ ವಿಶ್ವಕರ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ 18 ವಿವಿಧ ಕುಲ ಕಸುಬುಗಳನ್ನು ಒಂದೆಡೆ ಸೇರಿಸಿ ಪಿಎಂ-ಶ್ವಕರ್ಮ ಯೋಜನೆಯನ್ನು ಜಾರಿ ಮಾಡಿದೆ. ವಿಶ್ವಕರ್ಮ ಸಮಾಜದ ಪರಂಪರಾಗತ ಜ್ಞಾನವನ್ನು ಮುಂದಿನ ಪೀಳಿಗೆಗೆ ತಿಳಿಸಿ ಕೊಡುವ ನಿಟ್ಟಿನಲ್ಲಿ ಮತ್ತು ದೇಶದ ಪಾರಂಪರಿಕ ಕುಲಕಸುಬುಗಳಿಗೆ ಬಲ ತುಂಬುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಶ್ವಕರ್ಮರು ಅತ್ಯಂತ ಶ್ರೇಷ್ಠ ಮತ್ತು ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಜನ ಮಾನಸ ದಲ್ಲಿ ಅವರ ಬಗ್ಗೆ ವಿಶಿಷ್ಟ ನಂಬಿಕೆ ಇದೆ.ಆಧುನಿಕತೆಯ ಭರಾಟೆಯಲ್ಲಿ ಅಕ್ಕಸಾಲಿಗ, ಕುಂಬಾರ, ಬಡಗಿ, ಮಡಿವಾಳ, ನೇಕಾರ ಸೇರಿದಂತೆ ಹಲವು ಕುಲ ಕಸುಬುಗಳು ಅಳಿವಿನತ್ತ ಸಾಗುತ್ತಿದ್ದು ಇವುಗಳ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ. ಹೊಸ ತಲೆಮಾರನ್ನು ಈ ಕ್ಷೇತ್ರಗಳತ್ತ ಆರ್ಕಷಿಸುವ ಕಾರ್ಯ ನಡೆಯುತ್ತಿದೆ ಎಂದರು.
ನಿಟ್ಟೆ ಆಪ್ಟ್‌ಸಾಫ್ಟ್ ಟೆಕ್ನಾಲಜೀಸ್ ಸಂಸ್ಥಾಪಕ ಹರ್ಷವರ್ಧನ ನಿಟ್ಟೆ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನುರಿತ 5 ಹಿರಿಯ ಕುಶಲಕರ್ಮಿಗಳನ್ನು ಸನ್ಮಾನಿಸಲಾಯಿತು. ಸೆ.17ರಿಂದ ಅ.2ರವರೆಗೆ ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ನಡೆಯ ಲಿರುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪಂಚಾಯತ್ ಉಪಕಾರ್ಯ ದರ್ಶಿ ಎಸ್.ಎಸ್ ಕದ್ರೋಳ್ಳಿ, ಯೋಜನಾಧಿಕಾರಿ ಡಾ.ಉದಯ್ ಕುಮಾರ್ ಶೆಟ್ಟಿ, ನಗರಾಭಿವೃಧ್ದಿ ಕೋಶದ ಯೋಜನಾಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ವಿಶ್ವಕರ್ಮ ಒಕ್ಕೂಟದ ಉಡುಪಿ ಮತ್ತು ದ.ಕ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಡಾ.ಪ್ರತಿಮಾ ಜಯಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







