ರಾಜ್ಯ ಮರಾಠ ಸಮಾಜದ ಎಲ್ಲರೂ ‘ಮರಾಠ-ಕುಣಬಿ’ ಬರೆಸಲು ಕರೆ

ಉಡುಪಿ, ಸೆ.17: ಇದೇ ಸೆ.22ರಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರಲ್ಲಿ ರಾಜ್ಯದ ಮರಾಠ ಸಮಾಜದ ಪ್ರತಿಯೊಬ್ಬರೂ ಜಾತಿ- ಮರಾಠ, ಉಪಜಾತಿ- ಕುಣಬಿ ಎಂದೇ ನಮೂದಿಸುವಂತೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ನಿರ್ಧರಿಸಿದೆ ಎಂದು ಪರಿಷತ್ತಿನ ಉಡುಪಿ ಜಿಲ್ಲಾ ಘಟಕ ತಿಳಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪರಿಷತ್ತಿನ ಗೌರವ ಸಲಹೆಗಾರ ಕೇಶವರಾವ್, ಕಳೆದ ವಾರ ಬೆಂಗಳೂರಿನಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಪದಾಧಿಕಾರಿಗಳು, ಸಮಾಜದ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳು ಹಾಗೂ ಸಮಾಜ ಮುಖಂಡರ ಸಭೆಯಲ್ಲಿ ಸರ್ವಾನುಮತದ ನಿಣಯ ಕೈಗೊಳ್ಳಲಾಗಿದೆ ಎಂದರು.
ಸಮೀಕ್ಷೆಗಾರರು ಮನೆಗೆ ಬಂದಾಗ 16. ಧರ್ಮ ಕಾಲಂನಲ್ಲಿ -1.ಹಿಂದು, 17. ಜಾತಿ ಕಾಲಂನಲ್ಲಿ-839.ಮರಾಠ, 18.ಉಪಜಾತಿ ಕಾಲಂನಲ್ಲಿ -720.ಕುಣಬಿ (ಕೃಷಿಕ), 22.ಮಾತೃಭಾಷೆ ಕಾಲಂನಲ್ಲಿ -6.ಮರಾಠಿ ಎಂದು ನಮೂದಿಸುವಂತೆ ಜಿಲ್ಲೆಯ ಎಲ್ಲಾ ಸಮಾಜ ಬಾಂಧವರಲ್ಲಿ ಅವರು ಮನವಿ ಮಾಡಿದರು.
ಹಿಂದಿನ ಸಮೀಕ್ಷೆಗಳಲ್ಲಿ ಆರ್ಯ ಮರಾಠ, ಕ್ಷತ್ರಿಯ ಮರಾಠ ಹೀಗೆ ಬೇರೆ ಬೇರೆ ಉಪಜಾತಿಗಳನ್ನು ಬರೆಸಿದ್ದರಿಂದ ಗೊಂದಲಗಳುಂಟಾಗಿದ್ದು, ಇದೀಗ ಎಲ್ಲರೂ ಮರಾಠ-ಕುಣಬಿ ಎಂದೇ ಬರೆಸುವಂತೆ ರಾಜ್ಯದ ಎಲ್ಲಾ ಸಮಾಜ ಬಾಂಧವರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಮರಾಠರ ಜನಸಂಖ್ಯೆ 40ರಿಂದ 50 ಲಕ್ಷ ವಿರಬಹುದು ಎಂಬುದು ನಮ್ಮ ಅಂದಾಜು. ಆದರೆ ಕೆ.ಜಯಪ್ರಕಾಶ್ ಹೆಗ್ಡೆ ಸಿದ್ಧಪಡಿಸಿದ ಹಿಂದಿನ ವರದಿಯಲ್ಲಿ ನಮ್ಮ ಜನಸಂಖ್ಯೆಯನ್ನು 11 ಲಕ್ಷ ಎಂದು ನಮೂದಿಸಿ ದ್ದರು. ಹೀಗಾಗಿ ಸಮಾಜದ ನಿಖರ ಜನಸಂಖ್ಯೆಗಾಗಿ ಏಕರೀತಿಯ ಮಾಹಿತಿ ನೀಡುವಂತೆ ಬೆಂಗಳೂರಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ್‌ರಾವ್ ಕವಡೆ, ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಸತೀಶ್ ರಾವ್ ಪವಾರ್, ಮಧ್ವೇಶ ರಾವ್, ವಿಘ್ನೇಶ್ ಹೆರಿಯಾರ್ ಉಪಸ್ಥಿತರಿದ್ದರು.







