ನೈತಿಕ ರಾಜಕಾರಣದಲ್ಲಿ ಕ್ರಿಯಾಶೀಲರಾದರೆ ಪ್ರಜಾಪ್ರಭುತ್ವ ಗಟ್ಟಿ: ಡಾ.ಶಕೀಲಾ ಹೆಗ್ಡೆ

ಉಡುಪಿ, ಸೆ.17: ಸಂವಿಧಾನದ ಮೌಲ್ಯಗಳನ್ನು ಸಾಕಾರಗೊಳಿಸುವ ಉತ್ತಮ ಪ್ರಶಾಸನ ರೂಪಿಸುವ ರಾಜಕಾರಣ ದಿಂದ ಇಂದಿನ ಯುವಜನತೆ ವಿಮುಖವಾಗುತ್ತಿರುವುದು ಅತ್ಯಂತ ಕಳವಳಕಾರಿ. ಯುವಜನತೆ ನೈತಿಕ ರಾಜಕಾರಣ ದಲ್ಲಿ ಕ್ರಿಯಾಶೀಲರಾದಷ್ಟು ನಮ್ಮ ಪ್ರಜಾಪ್ರಭುತ್ವ ಗಟ್ಟಿಗೊಳ್ಳು ತ್ತದೆ ಎಂದು ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನ ರಾಜಕೀಯ ಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ.ಶಕೀಲಾ ಹೆಗ್ಡೆ ಹೇಳಿದ್ದಾರೆ.
ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂಎಸಿ ಹಾಗೂ ರಾಜಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ ಡಾ.ಹೆಗ್ಡೆ, ‘ಭಾರತದ ಪ್ರಜಾಪ್ರಭುತ್ವವನ್ನು ಸಶಕ್ತ ಗೊಳಿಸುವಲ್ಲಿ ಯುವಜನತೆಯ ಪಾತ್ರ’ದ ಕುರಿತು ಮಾತನಾಡುತಿದ್ದರು.
ಪ್ರಜಾಪ್ರಭುತ್ವದ ಮೌಲ್ಯಗಳು ಮಾನವೀಯ ಮೌಲ್ಯಗಳು. ಅವು ನಮ್ಮ ಸಂವಿಧಾನದ ಮೌಲ್ಯಗಳೂ ಹೌದು. ಆದ್ದರಿಂದ ಸಂವಿಧಾನದ ಮೌಲ್ಯಗಳನ್ನು ಸಾಕಾರಗೊಳಿಸುವ ಉತ್ತಮ ಪ್ರಶಾಸನ ರೂಪಿಸುವ ರಾಜಕಾರಣದಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಪ್ರಜಾಪ್ರಭುತ್ವದ ಪ್ರತಿಜ್ಞಾವಿಧಿ ಬೋಧಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಗೋಪಾಲಕೃಷ್ಣ ಎಂ.ಗಾಂವ್ಕರ್, ಪ್ರಜಾಪ್ರಭುತ್ವ ಕೇವಲ ಸರಕಾರಿ ಮಾದರಿಯಲ್ಲ, ಅದು ಜನರ ಜೀವನ ಕ್ರಮವಾಗಿದೆ ಎಂದರು.
ಇದೇ ಸಂದರ್ಭ ರಾಜ್ಯಶಿಕ್ಷಣ ನೀತಿಯಡಿ ಮಂಗಳೂರು ವಿ.ವಿ.ಯ ಎಲ್ಲಾ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಇರುವ ಕಡ್ಡಾಯ ಪತ್ರಿಕೆ ಸಾಂವಿಧಾನಿಕ ಮೌಲ್ಯಗಳ ಕುರಿತಾಗಿ ಡಾ.ಶಕೀಲಾ ಹೆಗ್ಡೆ ಮತ್ತು ಪ್ರಶಾಂತ್ ನೀಲಾವರ ಬರೆದ ಪುಸ್ತಕವನ್ನು ಪ್ರಾಂಶುಪಾಲರು ಬಿಡುಗಡೆಗೊಳಿಸಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ಶೈಕ್ಷಣಿಕ ಸಲಹೆಗಾರರಾದ ಪ್ರೊ. ಶ್ರೀಧರ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಜಕುಮಾರ್, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಉಪಸ್ಥಿತರಿದ್ದರು. ರಾಜಕೀಯ ಶಾಸ್ತ್ರ ಸಹಪ್ರಾಧ್ಯಾಪಕ ಪ್ರಶಾಂತ ನೀಲಾವರ ಕಾರ್ಯಕ್ರಮ ನಿರೂಪಿಸಿದರು.







