ಆತ್ಮ ಯೋಜನೆಯಡಿ ಡ್ರೋನ್ ಮೂಲಕ ಗೊಬ್ಬರ ಸಿಂಪರಣೆ ಪ್ರಾತ್ಯಕ್ಷಿಕೆ

ಉಡುಪಿ, ಸೆ.18: ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಕುಂದಾಪುರ ಹಾಗೂ ರೈತ ಸಂಪರ್ಕ ಕೇಂದ್ರ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಬಿಜೂರು ಹೋಸ್ಕೋಟೆಯ ಉತ್ಕೃಷ್ಟ ಸಭಾಭವನದಲ್ಲಿ ಆತ್ಮ ಯೋಜನೆಯಡಿ ಡ್ರೋನ್ ಮೂಲಕ ಗೊಬ್ಬರ ಸಿಂಪರಣೆ ಪ್ರಾತ್ಯಕ್ಷಿಕೆ ಮತ್ತು ಕಿಸಾನ್‌ಗೋಷ್ಠಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಉಪ ಯೋಜನಾ ನಿರ್ದೇಶಕ (ಆತ್ಮ) ಡಾ. ರಾಜೇಶ್ ಡಿ.ಪಿ. ಮಾತನಾಡಿ, ಹರಳು ರೂಪದ ಯೂರಿಯಾಗೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡುವುದರಿಂದ ರೈತರಿಗೆ ಖರ್ಚು ಕಡಿಮೆ ಯಾಗಲಿದೆ. ರೈತರು ಕಡಿಮೆ ದರದಲ್ಲಿ ದೊರೆಯುವ ಪರಿಸರ ಸ್ನೇಹಿ ನ್ಯಾನೋ ಯೂರಿಯಾ ಬಳಕೆ ಮಾಡುವುದ ರಿಂದ ಮಣ್ಣಿನ ಆರೋಗ್ಯ ಫಲವತ್ತತೆಯನ್ನು ಕಾಪಾಡಬಹುದು ಎಂದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರತಜ್ಞ ಡಾ. ನವೀನ್ ನ್ಯಾನೋ ಯೂರಿಯಾ ಉಪಯೋಗಗಳ ಬಗ್ಗೆ, ಸಸ್ಯಗಳಲ್ಲಿ ಅದು ಕಾರ್ಯ ನಿರ್ವಹಿಸುವ ಕುರಿತು ಹಾಗೂ ಯೂರಿಯಾ ಬಳಸುವ ಕುರಿತಂತೆ ಸಮಗ್ರ ಮಾಹಿತಿಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಬಿಜೂರು ಗ್ರಾಮಪಂಚಾಯತ್ ಅಧ್ಯಕ್ಷೆ ಚೆನ್ನಮ್ಮ, ಉಪಾಧ್ಯಕ್ಷ ರಂಜಿತ್ ಪೂಜಾರಿ, ಬೈಂದೂರು ಕೃಷಿಕ ಸಮಾಜದ ಅಧ್ಯಕ್ಷ ವೆಂಕಟೇಶ ಹೆಚ್, ಜಯರಾಮ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ. ನಾಗರಾಜ್ ನಾಯಕ್, ಶ್ರೀಧರ್ ಬಿಲ್ಲವ, ಗಾಯತ್ರಿ ದೇವಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ದೀಕ್ಷಿತಾ ಮತ್ತಿತರರು ಉಪಸ್ಥಿತರಿದ್ದರು.







