ದಲಿತರಿಗೆ ಅವಮಾನಿಸಿದ ಯತ್ನಾಳ್ ಬಂಧಿಸಿ: ಶ್ಯಾಮರಾಜ್ ಬಿರ್ತಿ

ಶ್ಯಾಮರಾಜ್ ಬಿರ್ತಿ
ಉಡುಪಿ, ಸೆ.19: ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನದ ಅಡಿಯಲ್ಲಿ ಗೆದ್ದು ಬಂದ ಬಸವನಗೌಡ ಯತ್ನಾಳ್ ಒಂದು ಧರ್ಮ ಮತ್ತು ಚಾಮುಂಡೇಶ್ವರಿ ದೇವಿಯ ಆಚರಣೆಯಲ್ಲಿ ದಲಿತರಿಗೆ ಅವಮಾನ ಮಾಡಿ ಹೇಳಿಕೆ ನೀಡುತ್ತಿರುವುದು ಅವರಿಗೆ ಬುಧ್ಧಿ ಭ್ರಮಣೆಯಾಗಿರುವ ಸಂಕೇತ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಆರೋಪಿಸಿದ್ದಾರೆ.
ಸಂವಿಧಾನದ ಪ್ರಕಾರ ಆಯ್ಕೆಯಾಗಿ ಜನಪ್ರತಿನಿಧಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಯತ್ನಾಳ್, ಚಾಮುಂಡಿ ದೇವಿಗೆ ಹೂ ಹಾಕುವವರು ಸನಾತನ ಧರ್ಮದವರೇ ಆಗಬೇಕು. ಒಬ್ಬ ದಲಿತ ಮಹಿಳೆಗೆ ಹೂ ಹಾಕುವ ಅಧಿಕಾರ ಇಲ್ಲ ಎಂಬುದು ಯಾವ ಸಂವಿಧಾನದಲ್ಲಿ ಬರೆದಿದೆ ಎಂಬುದನ್ನು ತೋರಿಸಲಿ ಎಂದು ಅವರು ಟೀಕಿಸಿದರು.
ದಲಿತರಿಗೆ ಅವಮಾನ ಮಾಡಿದ ಯತ್ನಾಳ್ ರಾಜಕೀಯ ಅಂತ್ಯ ಆರಂಭವಾಗಿದೆ. ಇದೇ ರೀತಿಯ ವರ್ತನೆ ಮುಂದು ವರಿಸಿದರೇ ಅವರ ರಾಜಕೀಯ ಜೀವನ ನಿರ್ನಾಮ ಆಗುವುದರಲ್ಲಿ ಸಂಶಯ ಇಲ್ಲ. ಸಾರ್ವಜನಿಕವಾಗಿ ದಲಿತ ಮಹಿಳೆಯರಿಗೆ ಅವಮಾನ ಮಾಡಿದ ಯತ್ನಾಳ್ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ವಯ ಸುಮೋಟೋ ಕೇಸು ದಾಖಲಿಸಿ ಜೈಲಿಗೆ ಹಾಕಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.





