ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸಾ ತರಬೇತಿ

ಕುಂದಾಪುರ: ಸೆ.19: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯರ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇದರ ಸಹಯೋಗದೊಂದಿಗೆ ಯುವ ರೆಡ್ ಕ್ರಾಸ್ ಘಟಕ ಹಾಗೂ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರದ ಇಶಾನಿ ಮೆಡಿಕಲ್ ಸೆಂಟರ್‌ನ ವೈದ್ಯಕೀಯ ಅಧಿಕಾರಿ ಡಾ.ಸೋನಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಿಮಗೆ ಎಷ್ಟು ಒಳ್ಳೆಯದು ಮಾಡಲಿಕ್ಕೆ ಆಗುತ್ತದೆಯೋ ಅಷ್ಟು ಒಳಿತು ಮಾಡಬೇಕು ಎಂದರು. ತಲೆ ಸುತ್ತು ಬಂದಾಗ, ಅಪಘಾತವಾಗಿ ರಕ್ತ ಸೋರಿಕೆಯಾದಾಗ, ನಾಡಿಮಿಡಿತ ವನ್ನು ಕಂಡುಕೊಳ್ಳುವ ಕುರಿತು, ಶಾಕ್ ತಗುಲಿದಾಗ, ಹಾವು ಕಚ್ಚಿದಾಗ ನಾವು ಯಾವೆಲ್ಲಾ ಕ್ರಮವನ್ನು ಕೈಗೊಳ್ಳ ಬೇಕೆಂಬ ಕುರಿತು ಸಮಗ್ರ ಮಾಹಿತಿಯನ್ನು ಅವರು ನೀಡಿದರು.
ಯುವ ರೆಡ್ ಕ್ರಾಸ್ ಸಂಯೋಜಕ ಸತ್ಯನಾರಾಯಣ ಪುರಾಣಿಕ ಮಾತನಾಡಿ ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಾಗೆಯೇ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡುವ ಮೂಲಕ ಅವರ ಮುಖದಲ್ಲಿ ನಗುವನ್ನು ತರಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.
ಪ್ರಾಂಶುಪಾಲೆ ಶಬೀನಾ ಎಚ್., ಉಪ ಪ್ರಾಂಶುಪಾಲೆ ಆಫ್ರಿನ್ ಖಾನ್, ವಾಣಿಜ್ಯ ವಿಭಾಗದ ಉಪನ್ಯಾಸಕ ನಾಗರಾಜ್, ವಿದ್ಯಾರ್ಥಿ ಪ್ರತಿನಿಧಿಗಳಾದ ಬಿಸಿಎ ವಿದ್ಯಾರ್ಥಿ ಮೊಹಮ್ಮದ್ ಸಿದ್ದಿಕ್ ಉಪಸ್ಥಿತರಿದ್ದರು. ಸಂಯೋಜಕ ಬಿಸಿಎ ವಿಭಾಗದ ಉಪನ್ಯಾಸಕ ಅಹಮದ್ ಖಲೀಲ್ ಸ್ವಾಗತಿಸಿದರು. ತೃತೀಯ ಬಿಕಾಂನ ವಿದ್ಯಾರ್ಥಿನಿ ಪಂಚಮಿ ವಂದಿಸಿದರು. ದ್ವಿತೀಯ ಬಿಸಿಎ ವಿಭಾಗದ ವಿದ್ಯಾರ್ಥಿನಿ ಸುಹೈಮ ಕಾರ್ಯಕ್ರಮ ನಿರೂಪಿಸಿದರು.







