ಜಗತ್ತಿನ ಸೃಷ್ಠಿ ದಿನದಿಂದಲೇ ನ್ಯಾಯದ ಪರಿಕಲ್ಪನೆ ಪ್ರಾರಂಭ: ಫಾ.ನೋಯೆಲ್ ಕರ್ಕಡ

ಉಡುಪಿ, ಸೆ.20: ಕಾನೂನು ಮತ್ತು ನ್ಯಾಯ ಒಂದೇ ನಾಣ್ಯದ ಎರಡು ಮುಖ. ಕಾನೂನು ಎಂಬುದು ಮನುಷ್ಯ ಒಳಿತನ್ನು ಬಯಸಲಿಕ್ಕೆ ಬಹಳ ಪ್ರಮುಖ್ಯವಾಗಿ ಬೇಕಾಗಿದೆ. ಕಾನೂನಿನ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಜಗತ್ತು ಸೃಷ್ಠಿಯಾಗಿದ್ದ ದಿನದಿಂದಲೇ ನ್ಯಾಯದ ಪರಿಕಲ್ಪನೆ ಪ್ರಾರಂಭ ವಾಯಿತು. ಪ್ರವಾದಿ ಮುಹಮ್ಮದ್, ಜೀಸಸ್, ನಾರಾಯಣ ಗುರುಗಳು, ಬಸವಣ್ಣ, ಅಂಬೇಡ್ಕರ್ ನ್ಯಾಯದ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು ಎಂದು ವಕೀಲ ಫಾ.ನೋಯೆಲ್ ಕರ್ಕಡ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಘಟಕದ ವತಿಯಿಂದ ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನದ ಪ್ರಯುಕ್ತ ಉಡುಪಿ ಶೋಕಾ ಮಾತಾ ಇಗರ್ಜಿಯ ಆವೆ ಮರಿಯಾ ಸಭಾಂಗಣದಲ್ಲಿ ಶುಕ್ರವಾರ ನಡೆದ ನ್ಯಾಯದ ಪರಿಕಲ್ಪನೆ ಮತ್ತು ನಮ್ಮ ಜೀವನದ ಮೇಲೆ ಅದರ ಪ್ರಭಾವ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಕಾನೂನಿನ ಉದ್ದೇಶ ಅರ್ಥಮಾಡಿಕೊಳ್ಳದೆ ಕಾನೂನಿನ ಪರಿಕಲ್ಪನೆ ಅರ್ಥವಾಗುವುದಿಲ್ಲ. ಕಾನೂನಿನ ಉದ್ದೇಶ ವೆಂದರೆ ಎಲ್ಲರಿಗೂ ಗೌರವಯುತವಾದ ಜೀವನ ನಡೆಸಲು ಅವಕಾಶ ಮಾಡಿಕೊಡುವುದು, ಪ್ರತಿಯೊಬ್ಬರು ಸಮಾನರು, ಸ್ವತಂತ್ರರು ಎಂದು ಪ್ರತಿಪಾದಿಸುವುದು, ನಮ್ಮ ಮೂಲಭೂತವಾದ ಹಕ್ಕುಗಳನ್ನು ರಕ್ಷಿಸುವುದು, ಇವೆಲ್ಲವೂ ಸಹ ಕಾನೂನಿನ ಉದ್ದೇಶವಾಗಿದೆ ಎಂದರು.
ಉಡುಪಿ ಡಿವೈ ಎಸ್ಪಿ ಪ್ರಭು ಡಿ.ಟಿ. ಮಾತನಾಡಿ, ನ್ಯಾಯ ಎಂಬುದು ಎಲ್ಲರಿಗೂ ಬೇಕು. ಹುಟ್ಟಿದ ಪ್ರತಿಯೊಂದು ಮಗುವಿನಿಂದ ಹಿಡಿದು ಸಾಯುತ್ತಿರುವಂತಹ ವ್ಯಕ್ತಿ ಆತ ಸತ್ತ ನಂತರವು ಅಂತ್ಯ ಸಂಸ್ಕಾರವನ್ನು ಸಹ ನ್ಯಾಯ ಯುತವಾಗಿ ಮಾಡಬೇಕು ಎಂದು ಬಯಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಘನತೆ ಮತ್ತು ಗೌರಯುತವಾಗಿ ಬದುಕುವ ವಾತಾವರಣ ಸಮಾಜದಲ್ಲಿಬೇಕು. ಪ್ರತಿಯೊಬ್ಬರೂ ಸಹ ಅದನ್ನೇ ಬುಯಸುತ್ತಾರೆ. ಅವರ ಘನತೆ, ಗೌರವ, ಹಕ್ಕು ಬಾಧ್ಯತೆಗಳನ್ನು ಗೌರವಿಸಬೇಕು ಪ್ರತಿಯೊಬ್ಬರಿಗೂ ಸಮಾನವಾಗಿ ಜೀವಿಸುವಂತಹ ಹಕ್ಕಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಮಾತನಾಡಿ, ಜಗತ್ತಿನಲ್ಲಿ ಧರ್ಮಗಳು ಹೆದರಿಸುವ, ಬೆದರಿಸು ಯಾವುದೇ ಸಿದ್ದಾಂತಗಳನ್ನು ಕಲಿಸಲಿಲ್ಲ. ಜಗತ್ತಿಗೆ ದಾರಾಳ ಪ್ರವಾದಿಗಳು, ದಾರ್ಶನಿಕರು, ಮಹಾಪುರುಷರು, ಸಾಧು ಸಂತರು ಬಂದಿದ್ದಾರೆ. ಆದರೆ ಯಾರು ಸಹ ಹಗೆತನದ, ದ್ವೇಷದ, ಭಯಪಡಿಸುವ ಸಿದ್ದಂತವನ್ನು ಕಲಿಸಿಕೊಡಲಿಲ್ಲ. ಬದಲಾಗಿ ಎಲ್ಲಾ ಪ್ರವಾದಿಗಳು, ಮಹಾಪುರುಷರು ಪ್ರೀತಿ, ಆತ್ಮವಿಶ್ವಾಸ, ಭರವಸೆ, ಧೈರ್ಯದಿಂದ ಬದುಕುವ ಪಾಠ, ಸಂದೇಶ ಹಾಗೂ ಮಾರ್ಗದರ್ಶನಗಳನ್ನು ಈ ಸಮಾಜಕ್ಕೆ ಕೊಟ್ಟುಹೋಗಿದ್ದಾರೆ. ಅದನ್ನು ಮತ್ತೆ ಮತ್ತೆ ಸಮಾಜಕ್ಕೆ ನೆನಪಿಸುವ ಕೆಲಸ ನಾವು ಮಾಡಬೇಕು. ಯಾರು ಯಾರನ್ನು ಭಯಪಡದೆ ಬದುಕುವ ಪಾಠವನ್ನು ಧರ್ಮಗಳು ಕಲಿಸಿಕೊಟ್ಟಿವೆ ಎಂದರು.
ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಅಲ್ಪಸಂಖ್ಯಾತರ ವೇದಿಕೆ ಜಿಲ್ಲಾಧ್ಯಕ್ಷ ಚಾರ್ಲ್ಸ್ ಆ್ಯಂಬ್ಲರ್ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಫೈಝ್ ಅಹಮದ್ ವಂದಿಸಿದರು. ಅಬ್ದುಲ್ ಅಝೀಜ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಸೀರತ್ ಅಭಿಯಾನದ ಸ್ವಾಗತ ಸಮಿತಿಯ ಕಾರ್ಯದರ್ಶಿ ಖಾಲಿದ್, ಫಾರೂಕ್, ಸದಸ್ಯರುಗಳಾದ ಶೇಖ್ ದಾವುದ್, ಇಕ್ಬಾಲ್ ಮನ್ನಾ, ಶಹಜಹನ್ ತೋನ್ಸೆ, ಮುಶೀರ್ ಶೇಖ್, ಫೀರು ಸಾಹೇಬ್, ಮೊದಲಾದವರು ಉಪಸ್ಥಿತರಿದ್ದರು.







