ಗಾಂಜಾ ಮಾರಾಟ ಆರೋಪ: ಇಬ್ಬರು ಮಣಿಪಾಲ ವಿದ್ಯಾರ್ಥಿಗಳ ಬಂಧನ

ಮಣಿಪಾಲ, ಸೆ.20: ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಸೆ.18ರಂದು ಬಂಧಿಸಿದ್ದಾರೆ.
ಬಂಧಿತರನ್ನು ಆರ್ಯನ್ ಸಿ.ತಾದಾನಿ ಹಾಗೂ ಆರ್ಯನ್ ಚಂಗಪ್ಪ ಎಂದು ಗುರುತಿಸಲಾಗಿದೆ. ಮಣಿಪಾಲದ ರಾಯಲ್ ಎಂಬೆಸಿ ಅಪಾರ್ಟ್ ಮೆಂಟಿನ 17ನೇ ಮಹಡಿಯ ಫ್ಲಾಟ್‌ಗೆ ದಾಳಿ ನಡೆಸಿದ ಪೊಲೀಸರು, ಆರ್ಯನ್ ಸಿ.ತಾದಾನಿನನ್ನು ಬಂಧಿಸಿ, ಸುಮಾರು 60,000 ರೂ. ಮೌಲ್ಯದ 2105 ಗ್ರಾಂ ಗಾಂಜಾ, ಹುಕ್ಕಾ, ಡಿಜಿಟಲ್ ಸ್ಕೇಲ್ ಹಾಗೂ 75,000ರೂ. ಮೌಲ್ಯದ ಐಫೋನ್‌ಗಳನ್ನು ವಶಪಡಿಸಿಕೊಂಡರು.
ಈ ಪ್ರಕರಣದ ಇನ್ನೊರ್ವ ಆರೋಪಿ ಆರ್ಯನ್ ಚಂಗಪ್ಪನನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿ, 20,000ರೂ. ಮೌಲ್ಯದ 627 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮಾದಕವಸ್ತು ಸೇವನೆಯ ವ್ಯಸನಿಗಳಾಗಿದ್ದು ಅವರು ಮಣಿಪಾಲದ ಪ್ರತಿಷ್ಟಿತ ಕಾಲೇಜಿನ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿಗಳಾಗಿದ್ದಾರೆ.
ಇವರು ಮಾದಕವಸ್ತುಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರು ವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಮಣಿಪಾಲ ಎಸ್ಶೈ ಅಕ್ಷಯ ಕುಮಾರಿ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.







