ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯ ಮೃತದೇಹ ಪತ್ತೆ

ಕುಂದಾಪುರ, ಸೆ.20: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯೊಬ್ಬನ ಮೃತದೇಹವು ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ.
ಮೃತರನ್ನು ಹೆಮ್ಮಾಡಿ ಜನತಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಹೆಮ್ಮಾಡಿ ಸಂತೋಷನಗರ ನಿವಾಸಿ ಲವೇಶ್ ಪೂಜಾರಿ ಎಂಬವರ ಪುತ್ರ ನಮೀಶ್(16) ಎಂದು ಗುರುತಿಸಲಾಗಿದೆ. ಲವೇಶ್ ಸೆ.17ರಂದು ಬೆಳಗ್ಗೆ ಮನೆಯಿಂದ ಬೈಕಿನಲ್ಲಿ ಕಾಲೇಜಿಗೆ ಹೋಗಿದ್ದು, ಸಂಜೆಯಾದರೂ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದನು. ಈ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹುಡುಕಾಡಿದಾಗ ಈತನ ಬೈಕ್ ಹಾಗೂ ಕಾಲೇಜು ಬ್ಯಾಗ್ ಹೆಮ್ಮಾಡಿ ಸಮೀಪದ ಕನ್ನಡಕುದ್ರು ನದಿ ತೀರದಲ್ಲಿ ಪತ್ತೆಯಾಗಿತ್ತು. ಬಳಿಕ ಅಗ್ನಿಶಾಮಕ ದಳ ಹಾಗೂ ಗಂಗೊಳ್ಳಿಯ ಈಜುಪಟು ದಿನೇಶ್ ಖಾರ್ವಿ ಹಾಗೂ ಸ್ಥಳೀಯರು ಕನ್ನಡಕುದ್ರು ನದಿಯಲ್ಲಿ ಹುಡುಕಾಟ ನಡೆಸಿದ್ದರು. ಶನಿವಾರ ಬೆಳಿಗ್ಗೆ ನಮೀಶ್ ಮೃತದೇಹ ಗಂಗೊಳ್ಳಿ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ. ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







