ಜಾತಿ ಗಣತಿ ವೇಳೆ ‘ಬಿಲ್ಲವ’ ಎಂದೇ ನಮೂದಿಸಿ: ಬಿಲ್ಲವ ಮುಖಂಡರ ಮನವಿ

ಉಡುಪಿ, ಸೆ.20: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22ರಿಂದ ನಡೆಯುವ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವೇಳೆ ಉಡುಪಿ ಜಿಲ್ಲೆಯ ಬಿಲ್ಲವ ಸಮುದಾಯದ ಪ್ರತಿಯೊಬ್ಬರು ಜಾತಿ(9) ಕಾಲಂನಲ್ಲಿ ಕಡ್ಡಾಯವಾಗಿ ‘ಬಿಲ್ಲವ’ ಎಂದೇ ನಮೂದಿಸಬೇಕು ಎಂದು ಜಿಲ್ಲೆಯ ಬಿಲ್ಲವ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಲ್ಲವ ಮುಖಂಡರು, ಸರಕಾರದ ಎಲ್ಲಾ ಮೀಸಲಾತಿ, ಸೌಲಭ್ಯಗಳು ಜನಸಂಖ್ಯೆಯ ಆಧಾರದಲ್ಲಿ ನಿರ್ಧಾರವಾಗುವುದರಿಂದ, ಬಿಲ್ಲವರೆಲ್ಲರೂ 9ನೇ ಜಾತಿ ಕಾಲಂನಲ್ಲಿ ಬಿಲ್ಲವ ಎಂದೇ ನಮೂದಿಸಬೇಕು. ಯಾರೂ ತಮ್ಮ ‘ಬಳಿ’ಯನ್ನು ನೀಡಬಾರದು ಎಂದರು.
ಹಿಂದಿನ ಜನಗಣತಿ ವೇಳೆ ಬಿಲ್ಲವರು ತಮ್ಮ ‘ಬಳಿ’ಯನ್ನು ಜಾತಿಯಾಗಿ ನೀಡಿದ್ದರಿಂದ 2011ರ ಜನಗಣತಿ ವೇಳೆ ಬಿಲ್ಲವರ ಸಂಖ್ಯೆ ತೀರಾ ಕಡಿಮೆ ಬಂದಿತ್ತು. ನಮ್ಮವರ ಕೆಲವು ಸರ್‌ನೇಮ್‌ಗಳು ಉಳಿದ ಜಾತಿಗಳ ಸರ್‌ನೇಮ್ ಒಂದೇ ಆಗಿದ್ದು, ಆಗ ಗೊಂದಲವಾಗಿತ್ತು. ಹೀಗಾಗಿ ಈ ಗೊಂದಲವನ್ನು ತಪ್ಪಿಸಲು ಕರಾವಳಿಯ ಬಿಲ್ಲವರೆಲ್ಲರೂ ಹೆಸರನ್ನು ಸರಿಯಾಗಿ ನೀಡಿ 9ನೇ ಜಾತಿ ಕಾಲಂನಲ್ಲಿ ‘ಬಿಲ್ಲವ’ ಎಂದೇ ಬರೆಸಬೇಕು. 10ನೇ ಉಪಜಾತಿ ಕಾಲಂನಲ್ಲಿ ಅನ್ವಯಿಸುವುದಿಲ್ಲ ಎಂದು ಬರೆಯಬೇಕು. ಅಲ್ಲದೇ 11ನೇ ಕಾಲಂನ ಜಾತಿಗೆ ಇರುವ ಸಮಾನಾರ್ಥಕ ಹೆಸರು ಎಂದು ಇರುವಲ್ಲಿ ಅನ್ವಯಿಸುವುದಿಲ್ಲ ಎಂದೇ ಬರೆಯಬೇಕು ಎಂದು ವಿವರಿಸಿದರು.
ಕರ್ನಾಟಕದಲ್ಲಿ ಈಗ 26 ಒಳಪಂಗಡಗಳಿರುವ ಬಿಲ್ಲವ ಸಮುದಾಯದ ಜನಸಂಖ್ಯೆ 40ರಿಂದ 50 ಲಕ್ಷವಿದ್ದು, ರಾಜ್ಯದ ನಾಲ್ಕನೇ ಗರಿಷ್ಠ ಜನಸಂಖ್ಯೆ ಹೊಂದಿರುವ ಅಂದಾಜಿದೆ. ಬಿಲ್ಲವ, ಈಡಿಗ, ನಾಮಧಾರಿ, ನಾಯಕ್ ಎಲ್ಲವೂ ಬಿಲ್ಲವ ಜಾತಿಯಡಿ ಬರಲಿದ್ದು, ಕರಾವಳಿಯ ಬಿಲ್ಲವರು ಮಾತ್ರ ಕಡ್ಡಾಯವಾಗಿ ಜಾತಿಯನ್ನು ‘ಬಿಲ್ಲವ’ ಎಂದೇ ನಮೂದಿಸುವಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಮುದಾಯ ನಾಯಕರು ಒಮ್ಮತದಿಂದ ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಕಾರ್ಕಳ ಸಂಘದ ಅಧ್ಯಕ್ಷ ಪ್ರಮಲ್‌ಕುಮಾರ್, ಬೈರಂಪಳ್ಳಿಯ ಡಾ.ಸಂತೋಷ್‌ಕುಮಾರ್, ಮುದ್ರಾಡಿಯ ಮಂಜುನಾಥ್ ಪೂಜಾರಿ, ಹೆಬ್ರಿ ತಾಲೂಕಿನ ಅಣ್ಣಪ್ಪ ಪೂಜಾರಿ, ಕಾಪು ತಾಲೂಕಿನ ಅನಿಲ್ ಪೂಜಾರಿ ಉಪಸ್ಥಿತರಿದ್ದರು.







