ಆಗುಂಬೆ ಘಾಟಿ ಸಂಚಾರಕ್ಕೆ ಮುಕ್ತ

ಹೆಬ್ರಿ, ಸೆ.20: ಶುಕ್ರವಾರ ರಾತ್ರಿ ಆಗುಂಬೆ ಘಾಟಿಯ ಆರನೇ ತಿರುವಿನಲ್ಲಿ ಭಾರೀ ಭೂಕುಸಿತ ಉಂಟಾಗಿ ಸ್ಥಗಿತ ಗೊಂಡಿದ್ದ ವಾಹನಗಳ ಸಂಚಾರ ಇಂದು ಅಪರಾಹ್ನದ ವೇಳೆ ಅಧಿಕಾರಿಗಳು ಬಿದ್ದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಆಗುಂಬೆ ಘಾಟಿಯ ಆರನೇ ತಿರುವಿನಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಅದರೊಂದಿಗೆ ಭೂಕುಸಿತದಿಂದ ಮಣ್ಣು ಕೂಡಾ ರಸ್ತೆಗೆ ಮೇಲೆ ರಾಶಿ ಬಿದ್ದಿತ್ತು. ಇದರಿಂದ ಘಾಟಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಮರವು ಚಲಿಸುತಿದ್ದ ಪಿಕ್‌ಅಪ್ ವಾಹನದ ಮೇಲೆ ಉರುಳಿದ್ದು, ವಾಹನದಲ್ಲಿದ್ದ ಚಾಲಕನಿಗೆ ಗಾಯವಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನನ್ನು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿ ಕೊಳ್ಳುತಿದ್ದಾನೆ ಎಂದು ತಿಳಿದುಬಂದಿದೆ.
ಇಂದು ಬೆಳಗಿನಿಂದಲೇ ಅಧಿಕಾರಿಗಳು, ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗಳು ಬಿರುಸಿನ ಕಾರ್ಯಾಚರಣೆ ನಡೆಸಿ ರಸ್ತೆಯ ಮೇಲೆ ಬಿದ್ದಿದ್ದ ಮರ ಹಾಗೂ ಮಣ್ಣನು ತೆರವುಗೊಳಿಸಲು ಶ್ರಮಿಸಿದರು. ಅಪರಾಹ್ನದ ವೇಳೆ ತೆರವು ಕಾರ್ಯಾಚರಣೆ ಮುಗಿದು ವಾಹನಗಳ ಸಂಚಾರ ಪುನರಾರಂಭ ಗೊಂಡಿವೆ. ಇದರಿಂದ ತೀರ್ಥಹಳ್ಳಿ, ಶಿವಮೊಗ್ಗ ಕಡೆಯಿಂದ ಬರುವ ವಾಹನಗಳು ಎಮಾಸ್ತಿಕಟ್ಟೆ ಮೂಲಕ ಉಡುಪಿಗೆ ಸಂಚರಿಸಿದವು.





