ಮುಡಾರು: ಸ್ವಚ್ಛತೆ ಅರಿವು, ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಮಾಜಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿಯವರ ಸಹಕಾರದೊಂದಿಗೆ ನೋಟ್ ಪುಸ್ತಕ ವಿತರಣೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಕಾರ್ಯಕ್ರಮವು ಮುಡಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಗೋಪಾಲ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೋಟ್ ಪುಸ್ತಕ ವಿತರಣೆ ಮಾಡಿ ಮಾತನಾಡಿದ ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಶಿಕ್ಷಣದ ಜೊತೆಗೆ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆಯೂ ಜಾಗೃತಿ ವಹಿಸುವುದು ಅತೀ ಅಗತ್ಯವಾಗಿದೆ ಎಂದರು.
ಕಾರ್ಕಳ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿ ದಿನನಿತ್ಯ ಪಾಲಿಸಬೇಕಾದ ಆರೋಗ್ಯ ಕ್ರಮಗಳು, ವೈಯಕ್ತಿಕ ಸ್ವಚ್ಛತೆ, ಕೈ ತೊಳೆಯುವ ವಿಧಾನ ಬಗ್ಗೆ ಪ್ರಾತ್ಯಕ್ಷತೆ ನೀಡಿದರು.
ವೇದಿಕೆಯಲ್ಲಿ ಮಾಜಿ ಸಹಾಯಕ ಗವರ್ನರ್ ಶೈಲೇಂದ್ರ ರಾವ್, ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ, ಧನಕೀರ್ತಿ ಜೈನ್, ಶಿವಕುಮಾರ್, ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರಾದ ಕಸ್ತೂರಿ ಕಾರಂತ್, ರೇಖಾ ಉಪಾಧ್ಯಾಯ, ಹರ್ಷಿಣಿ ವಿಜಯರಾಜ್, ಡಯಾಸ್ ಚೆರಿಯನ್ ಮತ್ತು ಬಾಲಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.







