ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ: ಉಡುಪಿ ಜಿಲ್ಲಾ ದಿಶಾ ಸಭೆಯಲ್ಲಿ ಚರ್ಚೆ

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ(ದಿಶಾ) ಸಮಿತಿ ಸಭೆಯಲ್ಲಿ ಬೈಂದೂರು ಹಾಗೂ ಕುಂದಾಪುರದ ಗ್ರಾಮೀಣ ಪ್ರದೇಶಗಳಲ್ಲಿನ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಸಾಕಷ್ಟು ಚರ್ಚೆಗೆ ಕಾರಣವಾಯಿತು.
ದೂರ ಸಂಪರ್ಕ ಇಲಾಖೆಯ ಪಿಜಿಎಂ ನವೀನ್ ಗುಪ್ತ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 196 ಮೊಬೈಲ್ ಟವರ್‌ಗಳಿದ್ದು, ಅವುಗಳಲ್ಲಿ 115 2ಜಿಯಿಂದ 4ಜಿಗೆ ಉನ್ನತೀಕರಣಗೊಳಿಸಲಾಗಿದೆ. ಬಾಕಿ ಉಳಿದವುಗಳನ್ನು ಉನ್ನತೀಕರಿಸಬೇಕು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ನಮ್ಮ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೀಪ್ಯಾಡ್ ಮೊಬೈಲ್‌ಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಇದರಿಂದ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿ ದ್ದಾರೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಉನ್ನತೀಕರಣದಿಂದ ಈ ಟವರ್ ಗಳಿಗೆ ಬ್ಯಾಂಡ್ ಒನ್ ಮತ್ತು ಬ್ಯಾಂಡ್ 28 ಅಳವಡಿಸಲಾಗುತ್ತದೆ. ಇದರಿಂದ ಬ್ಯಾಂಡ್ ಒನ್, ಟವರ್‌ನಿಂದ ಕೇವಲ 800ಮೀಟರ್‌ವರೆಗೆ ಮಾತ್ರ ನೆಟ್‌ವರ್ಕ್ ಸಿಗುತ್ತದೆ. ಮತ್ತೆ ಮನೆ ಒಳಗೆ ಯಾವುದೇ ನೆಟ್‌ವರ್ಕ್ ಸಿಗುವುದಿಲ್ಲ. ಆದುದರಿಂದ ಅವರೆಲ್ಲ ಕೀ ಪ್ಯಾಡ್ ಬದಲು ಸ್ಮಾರ್ಟ್ ಪೋನ್ ಬಳಸಬೇಕು ಎಂದರು.
ವಿದ್ಯುತ್ ಕಡಿತಗೊಂಡರೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಎಲ್ಲೂ ಸಿಗಲ್ಲ. ಯಾಕೆಂದರೆ ಟವರ್‌ಗಳಲ್ಲಿ ಡಿಸೇಲ್ ಕೊರತೆ ಇದೆ ಎಂದು ಶಾಸಕ ಕೊಡ್ಗಿ ತಿಳಿಸಿದರು. ಟವರ್‌ಗಳ ಅಳವಡಿಕೆ ಸಂಖ್ಯೆಯನ್ನು ಹೆಚ್ಚಿಸಬೇಕು. ಟವರ್ ಅಳವಡಿಕೆಗೆ ಕಷ್ಟಸಾಧ್ಯವಾದ ಪ್ರದೇಶಗಳನ್ನು ಗುರುತಿಸಿ, ಸ್ಯಾಟಲೈಟ್ ಮೂಲಕ ನೆಟ್‌ವರ್ಕ್ ಒದಗಿಸುವ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಕಟಪಾಡಿ ಅಂಡರ್‌ಪಾಸ್: ಕೊಲ್ಲೂರಿನಿಂದ ರಾಣಿ ಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಡೆತಡೆಯಾಗಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಪರಿಹಾರ ಕಾರ್ಯವನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ವೇಗವನ್ನು ಹೆಚ್ಚಿಸುವುದರೊಂದಿಗೆ ಗುಣ ಮಟ್ಟದೊಂದಿಗೆ ನಿಗಧಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಟಪಾಡಿ ಜಂಕ್ಷನ್ ಅಂಡರ್‌ಪಾಸ್ ಕಾಮಗಾರಿ ಕೈಗೊಳ್ಳಲು ಈಗಾಗಲೇ ಮಂಜೂರಾತಿ ದೊರೆತಿದೆ. ಕಾಮಗಾರಿಗೆ ಅಗತ್ಯವಿರುವ ವಸ್ತುಗಳನ್ನು ದಾಸ್ತಾನು ಮಾಡಿ ಕೊಳ್ಳುವು ದರೊಂದಿಗೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ಕಾಮಗಾರಿ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಧಕ್ಕೆಯಾಗದಂತೆ ಅಗತ್ಯ ಪರ್ಯಾಯ ಮಾರ್ಗಗಳನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಅಂಬಲಪಾಡಿ, ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಹಾಗೂ ಬಲಾಯಿಪಾದೆ ಸರ್ವಿಸ್ ರಸ್ತೆ ಕಾಮಗಾರಿ ಆರಂಭಿಸುವಂತೆ ಸಭೆಯಲ್ಲಿ ತಿಳಿಸಿದರು.
673ಕೋಟಿ ಹಣ ಪಾವತಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2025-26ನೇ ಸಾಲಿನಲ್ಲಿ ಒಟ್ಟು 126029 ಮಂದಿ ರೈತರಿಗೆ 25.71ಕೋಟಿ ರೂ. ಪಾವತಿಸ ಲಾಗಿದೆ. ಈ ಯೋಜನೆಯಡಿ ಈವರೆಗೆ ಜಿಲ್ಲೆ ಯಲ್ಲಿ ಒಟ್ಟು 673ಕೋಟಿ ರೂ. ಹಣವನ್ನು ಪಾವತಿಸಲಾಗಿದೆ. ನರೇಗಾ ಯೋಜನೆಯಡಿ ಕಾಲುಸಂಕ ನಿರ್ಮಾಣಕ್ಕೆ ಸರಕಾರ ಅವಕಾಶ ಕಲ್ಪಿಸಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕೊರಗ ಸಮುದಾಯದ ವಸತಿ ಕಾರ್ಯಕ್ರಮದಡಿ ಜಿಲ್ಲೆಗೆ ಘಟಕ ವೆಚ್ಚ 3.73ಲಕ್ಷ ರೂ.ನಂತೆ ಒಟ್ಟು 308 ಮನೆ ಗಳು ಮಂಜೂರಾಗಿವೆ ಎಂದು ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿಗಳು ಮಾಹಿತಿ ನೀಡಿದರು. ಈ ಹಣದಿಂದ ಗುಣಮಟ್ಟದ ಮನೆ ನಿರ್ಮಾಣ ಸಾಧ್ಯವಿಲ್ಲ. ಆದುದರಿಂದ ಕೊರಗರಿಗೆ ಮನೆ ನಿರ್ಮಿಸಿಕೊಡಲು ಮುಂದೆ ಬರುವ ಎನ್‌ಜಿಓಗಳ ಜೊತೆ ಅಧಿಕಾರಿಗಳು ಸಹಕರಿಸಬೇಕು. ಇದರಿಂದ ಗುಣಮಟ್ಟದ ಮನೆ ನಿರ್ಮಿಸಲು ಸಾಧ್ಯ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕುಂದಾಪುರ ಎಸಿ ರಶ್ಮಿ, ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ಇದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್ ಬಾಬು ಎಂ. ಉಪಸ್ಥಿತರಿದ್ದರು.
ಜಲ್‌ಜೀವನ್ ಕಾಮಗಾರಿ ಬಗ್ಗೆ ತನಿಖೆ
ಜಿಲ್ಲೆಯ 19ಕ್ಕೂ ಹೆಚ್ಚು ಗ್ರಾಪಂ ವ್ಯಾಪ್ತಿಯಲ್ಲಿ ನಡೆಸಲಾದ ಶುದ್ಧ ಕುಡಿಯುವ ನೀರು ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು ಸಮಾಧಾನಕರವಾಗಿಲ್ಲ. ಈ ಬಗ್ಗೆ ಆಯಾ ಗ್ರಾಪಂಗಳು ನಿರ್ಣಯವನ್ನು ಮಾಡಿದೆ. ಈ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಸಿ, ವರದಿ ನೀಡಬೇಕು ಸಂಸದ ಬಿ.ವೈ ರಾಘವೇಂದ್ರ ಅಭಿಯಂತರಿಗೆ ಸೂಚನೆ ನೀಡಿದರು.
ಕೇಂದ್ರ ಸರ್ಕಾರ ಜನರಿಗೆ ಶುದ್ಧ ನೀರು ಕುಡಿಯಬೇಕೆಂಬ ಆಶಯದೊಂದಿಗೆ ಜಲ್ ಜೀವನ್ ಮಿಷನ್ ಯೋಜನೆ ಯಡಿ ಜಿಲ್ಲೆಯಲ್ಲಿ 687 ಕೋಟಿ ರೂ. ಮೊತ್ತದಲ್ಲಿ 525 ಕಾಮಗಾರಿಗಳನ್ನು ಕೈಗೊಂಡಿದ್ದು, ಅವುಗಳಲ್ಲಿ 487 ಪೂರ್ಣಗೊಂಡಿದ್ದು, 38 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೇ.93ರಷ್ಟು ಸಾಧನೆಯಾಗಿದೆ. ಆದರೆ ಉಡುಪಿ ತಾಲೂಕಿನ 19 ಗ್ರಾಮ ಪಂಚಾಯತ್‌ಗಳಲ್ಲಿ ಕಾಮಗಾರಿಗಳು ಸರಿಯಾಗಿ ಆಗಿಲ್ಲವೆಂದು ಗ್ರಾಪಂ ಸಭೆಗಳಲ್ಲಿ ನಿರ್ಣಯ ಕೈಗೊಂಡಿದ್ದು, ಇದರ ವರದಿಯನ್ನು ತಾಂತ್ರಿಕವಾಗಿ ಅಥವಾ ಗುಣಮಟ್ಟದಲ್ಲಿ ಆಗಿದಿಯೇ ಎಂಬ ಬಗ್ಗೆ ಪರಿಶೀಲಿಸಿ, ನೀಡಬೇಕೆಂದು ತಿಳಿಸಿದರು.
ಗೋಶಾಲೆ ಸ್ಥಾಪಿಸಲು ಎಸ್ಪಿ ಮನವಿ
ಬೈಂದೂರು ತಾಲೂಕಿನಲ್ಲಿ ನಡೆದ ಹಲವು ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಹಲವು ಆರೋಪಿಗಳನ್ನು ಬಂಧಿಸಿದ್ದು, ಇನ್ನು ಎರಡು ಪ್ರಕರಣಗಳಲ್ಲಿ ಬಾಕಿ ಇದೆ. ಈ ಪ್ರಕರಣಗಳಲ್ಲಿ ಸಾಧ್ಯ ಇರುವಷ್ಟು ದನಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಮಂಗಳೂರು, ಭಟ್ಕಳ ಕಡೆಗಳಲ್ಲಿ ಬಿಡಾಡಿ ದನಗಳ ಸಂಖ್ಯೆ ಕಡಿಮೆ ಆಗಿದೆ. ಆದುದರಿಂದ ಬಿಡಾಡಿ ದನಗಳು ಹೆಚ್ಚು ಇರುವ ಕುಂದಾಪುರ, ಬೈಂದೂರು ಗ್ರಾಮೀಣ ಪ್ರದೇಶಗಳ ಕಡೆ ಕಳ್ಳರು ಬರುತ್ತಿದ್ದಾರೆ. ಆದುದರಿಂದ ಈ ಪ್ರದೇಶ ದಲ್ಲಿ ಗೋಶಾಲೆಯ ಅಗತ್ಯ ಇದೆ. ಇದಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದ್ದು, ಆರ್ಥಿಕ ಸಮಸ್ಯೆ ಇದೆ ಎಂದು ಸಭೆಗೆ ತಿಳಿಸಿದರು.
‘ಕೊಲ್ಲೂರು ಅಥವಾ ಇತರ ದೇವಸ್ಥಾನಗಳ ಮೂಲಕ ಗೋ ಶಾಲೆ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಬಿ.ವೈ.ರಾಘವೇಂದ್ರ ಕುಂದಾಪುರ ಎಸಿಯವರಿಗೆ ಸೂಚಿಸಿದರು.







