ಕೆಂಪು ಕಲ್ಲು, ಮರಳು, ಆವೆ ಮಣ್ಣಿನ ಸಮಸ್ಯೆ ಬಗ್ಗೆ ಜಂಟಿ ಸಭೆ

ಉಡುಪಿ, ಸೆ.23: ಜಿಲ್ಲೆಯಲ್ಲಿನ ಕೆಂಪು ಕಲ್ಲು, ಮರಳು, ಆವೆ ಮಣ್ಣಿನ ಸಮಸ್ಯೆ ಕುರಿತು ಸೆ.22ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧ್ಯಕ್ಷತೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಮುಖಂಡರ ಜಂಟಿ ಸಭೆಯನ್ನು ನಡೆಸಲಾಯಿತು.
ಜಿಲ್ಲೆಯ ಶಾಸಕರಾದ ಕಿರಣ್ ಕೊಡ್ಗಿ, ಸುನಿಲ ಕುಮಾರ್, ಯಶ್‌ಪಾಲ್ ಸುವರ್ಣ, ಗುರುರಾಜ್ ಗಂಟೆಹೊಳೆ ಸಮ್ಮುಖದಲ್ಲಿ ಕಾರ್ಮಿಕ ಸಂಘಗಳ ಮುಖಂಡರು ಕೆಂಪು ಕಲ್ಲು ಮತ್ತು ಮರಳು ಸಮಸ್ಯೆ ಪರಿಹಾರಕ್ಕೆ ಗಂಭೀರ ಚರ್ಚೆ ನಡೆಸಿದರು. ಶಾಸಕರು ಸಮಸ್ಯೆಯ ಗಂಭೀರತೆ ಅರಿತು ಪರಿಹಾರಕ್ಕಾಗಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಂಪು ಕಲ್ಲಿನ ರಾಯಲ್ಟಿಯಲ್ಲಿ ಸುಮಾರು ಟನ್ ಒಂದಕ್ಕೆ 175ರೂ. ಇಳಿಸುವ ಮತ್ತು ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಕಲ್ಲು ಸಾಗಾಟಕ್ಕೆ ಅವಕಾಶ ಮಾಡಿಕೊಡುವ ಭರವಸೆಯನ್ನು ಸಭೆಯಲ್ಲಿ ನೀಡಲಾಯಿತು. ಕಲ್ಲು ತೆಗೆಯಲು ಅನುಮತಿ ಹೆಚ್ಚಳ, ಇಲಾಖೆಗಳ ಅನುಮತಿ ಸರಳ, ಮರಳು ಅಕ್ಟೋಬರ್‌ನಲ್ಲಿ ಪ್ರಾರಂಭ, ಪಂಚಾಯತ್‌ಗಳಲ್ಲಿ ತೋಡು ಹೂಳೆತ್ತಲು ಕ್ರಮ ವಹಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ಟೆಂಡರ್ ಆಧಾರಿತ ಬ್ಲಾಕ್ ಹೆಚ್ಚಿಸಲು ಪ್ರಯತ್ನ ಮಾಡಲಾಗುವುದು ಮತ್ತು ಆ ಮೂಲಕ ಕೆಂಪು ಕಲ್ಲು ಮತ್ತು ಮರಳು ಹೆಚ್ಚು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ಭರವಸೆ ನೀಡಿದರು. ಹೆಂಚು ಕೈಗಾರಿಕೆಗೆ ಬೇಕಾದ ಆವೆ ಮಣ್ಣು ತೆಗೆಯಲು ಇರುವ ನಿರ್ಬಂಧ ಹಾಗು ಅನುಮತಿ ಸಮಸ್ಯೆ ನಿವಾರಿಸಲು ಹಾಗೂ ಹೆಚ್ಚು ಆವೆ ಮಣ್ಣು ದೊರೆಯುವಂತೆ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.
ಸಭೆಯಲ್ಲಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕೋಶಾಧಿಕಾರಿ ಚಂದ್ರಶೇಖರ್ ವಿ., ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಗೊಲ್ಲ, ಅಧ್ಯಕ್ಷ ಸುಭಾಶ್ಚಂದ್ರ ನಾಯಕ್, ಮುಖಂಡರಾದ ಸಯ್ಯದ್ ಅಲಿ, ರಮೇಶ್ ಮೊದಲಾದವರು ಭಾಗವಹಿಸಿದ್ದರು.







