ಎರಡನೇ ದಿನವೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದ ಸಮೀಕ್ಷೆ: ಆ್ಯಪ್‌ನಲ್ಲಿ ತಾಂತ್ರಿಕ ತೊಂದರೆ, ನ್ಯಾಯಾಲಯದ ತೀರ್ಪಿನ ನಿರೀಕ್ಷೆ

ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಎರಡನೇ ದಿನವಾದ ಮಂಗಳವಾರವೂ ಉಡುಪಿ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡಿಲ್ಲ ಎಂದು ತಿಳಿದುಬಂದಿದೆ.
ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಯಬೇಕಿದ್ದು, ಇಂದು ಅಪ್‌ಡೇಟ್‌ನೊಂದಿಗೆ ನೀಡಿರುವ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಸಮೀಕ್ಷೆಗೆಂದು ತೆರಳಿದ ಸಾಕಷ್ಟು ಮಂದಿಗೆ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಅವರೆಲ್ಲರೂ ಬರಿಗೈಲಿ ಮರಳಿದ್ದಾರೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಮೀಕ್ಷೆ ನಿನ್ನೆ ರಾಜ್ಯಾದ್ಯಂತ ಪ್ರಾರಂಭಗೊಳ್ಳಬೇಕಿತ್ತು. ಆದರೆ ತಮ್ಮ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲೆಯ ಬಹುಸಂಖ್ಯಾತ ಶಿಕ್ಷಕ ಗಣತಿದಾರರು ನಿನ್ನೆ ಸಮೀಕ್ಷೆಗೆ ಹೋಗಿರಲಿಲ್ಲ. ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಗಳು ಗಣತಿದಾರ ರೊಂದಿಗೆ ಮಾತುಕತೆ ನಡೆಸಿದ ಬಳಿಕ ಇಂದಿನಿಂದ ಸಮೀಕ್ಷೆ ನಡೆಸಲು ನಿರ್ಧರಿಸಿದ್ದರು.
ಆದರೆ ಇಂದು ಸಹ ಬಹುಸಂಖ್ಯಾತ ಶಿಕ್ಷಕರು ಸಮೀಕ್ಷೆ ಪ್ರಾರಂಭಿಸಿಲ್ಲ. ಗಣತಿಯನ್ನು ಆಕ್ಷೇಪಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಗಳ ಕುರಿತ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯ ನಾಳೆ ತನ್ನ ತೀರ್ಪನ್ನು ನೀಡುವ ನಿರೀಕ್ಷೆ ಇದೆ. ತೀರ್ಪು ಹೊರಬಿದ್ದ ಬಳಿಕ ಸಮೀಕ್ಷೆ ಪ್ರಾರಂಭಿಸಲು ಕೆಲವು ಶಿಕ್ಷಕರು ನಿರ್ಧರಿಸಿದ್ದಾರೆ ಎಂದು ಗಣತಿದಾರ ಶಿಕ್ಷಕ ರೊಬ್ಬರು ತಿಳಿಸಿದರು.
ಜಿಲ್ಲೆಯಲ್ಲಿ ಕೇವಲ ಶೇ.5ರಷ್ಟು ಶಿಕ್ಷಕ ಗಣತಿದಾರರು ಸಮೀಕ್ಷೆ ನಡೆಸುತಿದ್ದಾರೆ. ಕೋರ್ಟ್ ತೀರ್ಪಿನ ಬಳಿಕ ಜಿಲ್ಲೆ ಯಲ್ಲಿ ಗಣತಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಳ್ಳಬಹುದು. ಅಷ್ಟರಲ್ಲಿ ಮೊಬೈಲ್ ಆ್ಯಪ್‌ನ ತಾಂತ್ರಿಕ ಸಮಸ್ಯೆಯೂ ಬಗೆಹರಿಯಬೇಕಾಗಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಯ 1800 ಮತ್ತು ಪ್ರೌಢ ಶಾಲೆಗಳ ಸುಮಾರು 800 ಮಂದಿ ಶಿಕ್ಷಕರು ಸಮೀಕ್ಷೆ ಕೈಗೊಳ್ಳಲಿದ್ದಾರೆ. ಕೊರತೆಯಾಗುವ ಸುಮಾರು 500ರಷ್ಟು ಗಣತಿದಾರರನ್ನು ವಿವಿಧ ಇಲಾಖೆಗಳಿಂದ ನಿಯೋಜಿಸಲಾಗುತ್ತಿದೆ ಎಂದಿರುವ ಅಂಪಾರು ದಿನಕರ ಶೆಟ್ಟಿ, ಖಂಡಿತ ಶಿಕ್ಷಕ ಗಣತಿದಾರರು ಸಮೀಕ್ಷೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಸಿಕೊಡಲಿದ್ದಾರೆ ಎಂದರು.







