ಶಾಸಕರು ಪಡಿತರ ಚೀಟಿ ರದ್ದು ಕುರಿತು ಸತ್ಯ ತಿಳಿಸಲಿ: ರಮೇಶ್ ಕಾಂಚನ್

ಉಡುಪಿ, ಸೆ.24: ಕರ್ನಾಟಕದಲ್ಲಿ 7.76 ಲಕ್ಷ ಸಂಶಯಾಸ್ಪದ ಪಡಿತರ ಚೀಟಿಗಳಿವೆ ಎಂದು ಗುರುತಿಸಿರುವ ಕೇಂದ್ರ ಬಿಜೆಪಿ ಸರಕಾರ ಅಂತಹ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವಂತೆ ರಾಜ್ಯ ಸರಕಾರಕ್ಕೆ ಸ್ಪಷ್ಟ ಸೂಚನೆ ಯನ್ನು ನೀಡಿದೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಡುಪಿ ಶಾಸಕ ಯಶಪಾಲ್ ಸುವರ್ಣ ತನ್ನನ್ನು ಗೆಲ್ಲಿಸಿ ಕಳುಹಿಸಿದ ಜನರಿಗೆ ಸತ್ಯವನ್ನು ತಿಳಿಸುವ ಬದಲು ಸುಳ್ಳು ಮಾಹಿತಿ ನೀಡಿ ಅನರ್ಹ ಪಡಿತರ ಚೀಟಿಗಳನ್ನು ರಾಜ್ಯ ಸರಕಾರ ರದ್ದು ಮಾಡಲು ಹೊರಟಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಟೀಕಿಸಿದ್ದಾರೆ.
ಕೇಂದ್ರ ಸರಕಾರದ ತೆರಿಗೆ ಮಂಡಳಿ ವರದಿ ಪ್ರಕಾರ ಕರ್ನಾಟಕದಲ್ಲಿ 5.80 ಲಕ್ಷ ಜನರು ಬಿ.ಪಿ.ಎಲ್ ಕಾರ್ಡ್ ಪಡೆಯಲು ಅರ್ಹರಲ್ಲ. ಆದರೆ ಕಾರ್ಡ್ ರದ್ದು ಮಾಡುವ ಈ ಕ್ರಮ ಸರಿಯಾದ ಮಾರ್ಗವಲ್ಲ. ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು. ಇದಕ್ಕಾಗಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಕರ್ನಾಟಕ ರಾಜ್ಯದಿಂದ ಆರಿಸಿ ಹೋಗಿರುವ ಬಿಜೆಪಿ ಸಂಸದರು ಕೇವಲ ದೆಹಲಿಗೆ ಹೋಗಿ ಕುರ್ಚಿ ಬಿಸಿ ಮಾಡಿ ಬರುವುದನ್ನು ಬಿಟ್ಟು ಕೇಂದ್ರ ಬಿಜೆಪಿ ಸರ್ಕಾರದ ಈ ಜನವಿರೋಧಿ ನಿರ್ಧಾರವನ್ನು ವಿರೋಧಿಸುವ ಕೆಲಸ ಮಾಡಬೇಕಾಗಿದೆ.
ಕೇಂದ್ರ ಸರಕಾರ ಪ್ರತಿ ಬಾರಿ ರಾಜ್ಯದ ಜನತೆಗೆ ಮೋಸ ಮಾಡಿಕೊಂಡು ಬಂದಿದ್ದು ರಾಜ್ಯ ಸರಕಾರವು ಬಿ.ಪಿ.ಎಲ್ ಕಾರ್ಡ್ ರದ್ದು ಮಾಡಿದೆ ಎಂದು ಸುಳ್ಳು ಹೇಳಿ ಜನರಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿಸಿರುವುದು ಸಾಕ್ಷಿಯಾ ಗಿದೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಗ್ಯಾರಂಟಿ ಯೋಜನೆಗೊಸ್ಕರ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡಿರು ವುದು ಎಂದು ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಿ ಸಾಧ್ಯವಾದರೆ ಉಡುಪಿ ಜಿಲ್ಲೆಯ ಶಾಸಕರು ಹಾಗೂ ಸಂಸದರು ಸೇರಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅನರ್ಹ ಬಿ.ಪಿ.ಎಲ್ ಕಾರ್ಡ್ ರದ್ದತಿಯ ಈ ಜನವಿರೋಧಿ ನಡೆಯನ್ನು ಕೈ ಬಿಡುವಂತೆ ಆಗ್ರಹಿಸಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







