ಇನ್ನೂ ಸರಿಯಾಗದ ಆ್ಯಪ್‌ನ ತಾಂತ್ರಿಕ ಸಮಸ್ಯೆ; ನಡೆಯದ ಸಮೀಕ್ಷೆ

ಉಡುಪಿ, ಸೆ.24: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯಬೇಕಿದ್ದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸತತ ಮೂರನೇ ದಿನವೂ ಸಮರ್ಪಕ ರೀತಿಯಲ್ಲಿ ಪ್ರಾರಂಭಗೊಂಡಿಲ್ಲ. ಸಮೀಕ್ಷೆಗಾಗಿ ನೀಡಿದ ಮೊಬೈಲ್ ಆ್ಯಪ್‌ನ ತಾಂತ್ರಿಕ ಸಮಸ್ಯೆ ಇನ್ನೂ ಪರಿಹಾರ ಕಾಣದಿರುವುದೇ ಇಂದೂ ಸಮೀಕ್ಷೆ ನಡೆಯದಿರಲು ಕಾರಣ ಎಂದು ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ತಿಳಿಸಿದ್ದಾರೆ.
ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಶೇ.5ರಷ್ಟು ಸಮೀಕ್ಷೆ ಪೂರ್ಣಗೊಂಡಿರ ಬಹುದು. ಆದರೆ ಇಂದು ಸಮೀಕ್ಷೆ ನಡೆಯದಿ ರಲು ಸಮೀಕ್ಷೆಗೆ ನೀಡಿರುವ ಆ್ಯಪ್ ಕೆಲಸ ಮಾಡದಿರುವುದೇ ಕಾರಣ. ಹೀಗಾಗಿ ಸಮೀಕ್ಷೆಗೆ ತೆರಳಿದ ಎಲ್ಲರೂ ಬರಿಗೈಲಿ ಫೀಲ್ಡ್‌ನಿಂದ ಮರಳಿ ಬಂದಿದ್ದಾರೆ ಎಂದು ಅವರು ತಿಳಿಸಿದರು.
ಈ ನಡುವೆ ಸಂಘದ ಹಾಗೂ ಗಣತಿದಾರ ಶಿಕ್ಷಕರ ಪ್ರಮುಖ ಬೇಡಿಕೆಗಳಾದ ಗಂಭೀರ ಆರೋಗ್ಯ ಸಮಸ್ಯೆ ಇರುವ ಶಿಕ್ಷಕರನ್ನು, 59 ವರ್ಷ ಮೇಲ್ಪಟ್ಟ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನು, ವಿಕಲಚೇತನ ಶಿಕ್ಷಕರನ್ನು ಹಾಗೂ ಗರ್ಭಿಣಿ ಶಿಕ್ಷಕಿಯರನ್ನು ಸಮೀಕ್ಷಾ ಪಟ್ಟಿಯಿಂದ ಕೈಬಿಡುವಂತೆ ಮಾಡಿಕೊಂಡ ಮನವಿ ಇನ್ನೂ ಈಡೇರಿಲ್ಲ ಎಂದವರು ಹೇಳಿದರು.
15ದಿನಗಳಲ್ಲಿ 150ಕ್ಕೂ ಅಧಿಕ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುವುದು ಎಷ್ಟು ತ್ರಾಸದಾಯಕ ಕೆಲಸ ಎಂಬುದು ಎಲ್ಲರಿಗೂ ಅರಿವಿದೆ. ಆದರೆ ಮಾನವೀಯ ನೆಲೆಯಲ್ಲಿ ಅಶಕ್ತ ಶಿಕ್ಷಕರನ್ನು ಪಟ್ಟಿಯಿಂದ ಕೈಬಿಡುವಂತೆ ಈ ಮೊದಲೇ ಮನವಿ ಮಾಡಿದ್ದರೂ, ಅವರಿಗೆ ಇನ್ನೂ ವಿನಾಯಿತಿ ನೀಡಲಾಗಿಲ್ಲ. ಜಿಲ್ಲೆಯಲ್ಲಿ ಇರುವ ಇಂಥ ಸುಮಾರು 150ರಷ್ಟು ಶಿಕ್ಷಕರ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ. ಮಾನವೀಯತೆ ನೆಲೆಯಲ್ಲಿ ಅವರನ್ನು ಸಮೀಕ್ಷೆಯಿಂದ ಕೈಬಿಡಬೇಕೆಂಬುದು ನಮ್ಮ ಈಗಿನ ಆಗ್ರಹವಾಗಿದೆ ಎಂದು ದಿನಕರ ಶೆಟ್ಟಿ ತಿಳಿಸಿದರು.
ಇನ್ನು ಆ್ಯಪ್‌ನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ತಮ್ಮ ಕೈಲಾದ ಪ್ರಯತ್ನ ನಡೆಸುತಿದ್ದಾರೆ. ಆಯೋಗ ಈ ಬಗ್ಗೆ ತಕ್ಷಣ ಗಮನ ಹರಿಸಬೇಕು. ಸಮರ್ಪಕ ವಾದ ಆ್ಯಪ್ ಎಷ್ಟು ಬೇಗ ನಮಗೆ ಸಿಗುವುದೊ ಅಷ್ಟು ವೇಗದಲ್ಲಿ ಸಮೀಕ್ಷೆ ಯನ್ನು ನಡೆಸಲು ನಾವು ಬದ್ಧರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಸಮೀಕ್ಷೆಗೆ ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೇ, ತರಾತುರಿಯಿಂದ ಸಮೀಕ್ಷೆಗೆ ಮುಂದಾಗಿರುವುದು ಈಗಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ. ಆಯೋಗ ಎಲ್ಲಾ ಅಂಶಗಳ ಬಗ್ಗೆ ಸರಿಯಾದ ಸಿದ್ಧತೆ ಮಾಡಿಕೊಂಡು ಸಮೀಕ್ಷೆಗೆ ಮುಂದಡಿ ಇಡಬೇಕಿತ್ತು ಎಂದು ಅಂಪಾರು ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಸಹಾಯವಾಣಿ ಸ್ಥಾಪನೆ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಸೆ.22ರಿಂದ ಅಕ್ಟೋಬರ್ 7 ರವರೆಗೆ ರಾಜ್ಯಾದ್ಯಂತ ನಡೆಯಲಿದ್ದು, ಈ ಸಮೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ರಾಜ್ಯಮಟ್ಟ ದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಹೆಲ್ಪ್‌ಲೈನ್ ಪ್ರಾರಂಭಿಸಲಾಗಿದೆ.
ರಾಜ್ಯಮಟ್ಟದ ಸಹಾಯವಾಣಿ ಸಂಖ್ಯೆ: 8050770004 ಮತ್ತು ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ:0820-2574881. ತಾಲೂಕು ಮಟ್ಟದಲ್ಲಿ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲೂಕಿಗೆ ಸಂಬಂಧಿಸಿದಂತೆ ಉಡುಪಿಯ ತಾಲೂಕು ಪಂಚಾಯತ್ ಆವರಣದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ದೂ.ಸಂಖ್ಯೆ: 0820-2520739, ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಸಂಬಂಧಿಸಿದಂತೆ ಕುಂದಾಪುರ ಟೌನ್ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಳ ಕಚೇರಿ ದೂ.ಸಂಖ್ಯೆ: 9972294198, ಕಾರ್ಕಳ ಹಾಗೂ ಹೆಬ್ರಿ ತಾಲೂಕಿಗೆ ಸಂಬಂಧಿಸಿದಂತೆ ಕಾರ್ಕಳ ಕೆಇಬಿ ಬಳಿಯ ಡಿ.ದೇವರಾಜ ಅರಸು ಭವನ ದೂ.ಸಂಖ್ಯೆ: 08258-298610 ಅನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.







