ಮಕ್ಕಳಿಗೆ ರಂಗಭೂಮಿ ಶಿಕ್ಷಣ ಮಾಹಿತಿ ಕಾರ್ಯಾಗಾರ

ಬ್ರಹ್ಮಾವರ, ಸೆ.25: ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ, ಬ್ರಹ್ಮಾವರ ರೋಟರಿ ರೋಯಲ್, ಕಾವಡಿ ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗೆ ರಂಗಭೂು ಶಿಕ್ಷಣ ಮಾಹಿತಿ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ರಂಗಭೂಮಿ ರೋಟರಿ ರಾಯಲ್ ಬ್ರಹ್ಮಾವರ ಅಧ್ಯಕ್ಷ ಚಂದ್ರಶೇಖರ ನಾಯರಿ ಮಾತನಾಡಿ, ಶಿಕ್ಷಣವೆಂದರೆ ಮನುಷ್ಯನ ಮೂಲ ಭಾವನೆ ಮತ್ತು ನವರಸಗಳನ್ನು ವ್ಯಕ್ತಪಡಿಸುವ ವಿಧಾನವೇ ಆಗಿದೆ. ಅದು ಕ್ರೋಧ ಅನುಕಂಪ, ಧೈರ್ಯ, ಭೀಭತ್ಸ, ಭಯ, ಶೃಂಗಾರ, ಶಾಂತಿ ಮತ್ತು ದುಃಖ ಆಶ್ಚರ್ಯಗಳನ್ನು ತಮ್ಮ ದೇಹ ಮತ್ತು ಮುಖದ ಭಾವನೆಗಳ ಮೂಲಕ ಅಭಿವ್ಯಕ್ತಗೊಳಿಸುವ ಈ ರಹಸ್ಯ ಪ್ರಪಂಚದಲ್ಲಿ ಹಾಡು, ಕುಣಿತ, ಸಂಗೀತ, ಉಡುಪು ಮತ್ತು ಬಣ್ಣಗಳ ಮೂಲಕ ಕಲ್ಪನೆಯನ್ನು ಪ್ರತಿನಿಧಿಸುತ್ತದೆ ಮತ್ತು ಸೃಜನಾತ್ಮಕತೆಯನ್ನು ವ್ಯಕ್ತಪಡಿಸಿ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಕುಮಾರ್ ಶೆಟ್ಟಿ, ಕಾವಡಿ ಮಾತಾಡಿ, ರಂಗಭೂಮಿ ಎಂದರೆ ಕಲ್ಪನೆಯ ಅಥವಾ ಕಥೆ ಹೇಳುವಿಕೆಯ ವಿಸ್ತರಣೆಯಾಗಿದೆ. ಅಲ್ಲದೇ ಅದು ಪುರಾಣ, ಮಹಾಭಾರತ, ರಾಮಾಯಣಗಳನ್ನೊಳಗೊಂಡ ವಸ್ತು ಪ್ರಪಂಚವನ್ನು ಪ್ರತಿನಿಧಿಸುತ್ತದೆ. ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಜೀವ ವಿಮಾ ಉದ್ಯೋಗಿ ರಾಘವೇಂದ್ರ ಸಾಮಗ ಮಾತನಾಡಿದರು. ಅಧ್ಯಕ್ಷತೆ ಯನ್ನು ಕಾವಡಿ ಸರಕಾರಿ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ರಾಮ್ ಶೆಟ್ಟಿ ಹಾರಾಡಿ ಮತ್ತು ಅನಿಷಾ ಬಾಯರಿ ಪೇತ್ರಿ ಹಾಗೂ ಶಾರದಾ ಅಂಪಾರ್ ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸಿ ವಿವಿಧ ಚಟುವಟಿಕೆಯನ್ನು ಪ್ರದರ್ಶಿಸಿ ರಂಗಭೂಮಿಯ ವಿವಿಧ ಭಂಗಿ, ಸ್ವರ, ಆಲಿಸುಕೆ ಮತ್ತು ಭಾವಾರ್ಥ ಪ್ರಕಟಣೆ ಬಗ್ಗೆ ವಿವರಿಸಿ ಪ್ರಾತ್ಯಕ್ಷಿತೆ ನೀಡಿದರು.
ಸಭೆಯಲ್ಲಿ ಉದ್ಯಮಿ ಸುಗುಣ ಬಿ.ಕೆ. ಶೇಖರ್, ರೋಟರಿ ಕಾರ್ಯದರ್ಶಿ ಉಮಾಶಂಕರ್ ಶೆಟ್ಟಿ, ಕಾವಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಜಿ. ಉಪಸ್ಥಿತರಿದ್ದರು. ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಮೇಶ್ ವಕ್ವಾಡಿ ಸ್ವಾಗತಿಸಿ ವಂದಿಸಿದರು. ದಿವ್ಯ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 59 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.







