ಕನ್ನಡ ರಂಗಭೂಮಿ ಹಲವು ಹೊರಳು ದಾರಿಗಳನ್ನು ದಾಟಿ ಬಂದಿದೆ: ವೆಂಕಟರಮಣ ಐತಾಳ್

ಕುಂದಾಪುರ, ಸೆ.29: ಸ್ವಾತಂತ್ರ್ಯ ಪೂರ್ವದ ವಸಾಹತು ಕಾಲದಿಂದಲೂ ರಾಷ್ಟ್ರೀಯ ರಂಗಭೂಮಿ ಮಾತ್ರವಲ್ಲದೆ ಕನ್ನಡ ರಂಗಭೂಮಿಯು ತನ್ನದೇ ಆದ ಹೊಸ ಹೊಸ ನೆಲೆಗಳನ್ನು ಕಂಡುಕೊಳ್ಳುತ್ತಲೇ ಬಂದಿದೆ. ಕನ್ನಡ ರಂಗ ಭೂಮಿ ಹಲವಾರು ಹೊರಳು ದಾರಿಗಳನ್ನು ದಾಟಿ ಬಂದಿದೆ ಎಂದು ಎಂದು ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಸಮುದಾಯ ಕುಂದಾಪುರ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ’ಕನ್ನಡ ರಂಗಭೂಮಿ ಸವಾಲುಗಳು ಮತ್ತು ಸಾಧ್ಯತೆಗಳು’ ಕುರಿತು ಮಾತನಾಡುತ್ತಿದ್ದರು
20ನೇ ಶತಮಾನದ ಆಧುನಿಕ ಸಂದರ್ಭದಲ್ಲಿ ಜಾಗತೀಕರಣ, ಖಾಸಗಿಕರಣ ಅಲ್ಲದೆ ಸಾಮಾಜಿಕ ಜಾಲತಾಣಗಳ ಪರಿಣಾಮವಾಗಿ ಕನ್ನಡ ರಂಗಭೂಮಿ ತನ್ನ ಅಸ್ತಿತ್ವಕ್ಕೆ ಹೊಸ ಹೊಸ ನೆಲೆಗಳನ್ನು ಕಂಡುಕೊಳ್ಳಬೇಕಾಗಿದೆ. ರಂಗಭೂಮಿ ಸಾಮಾಜಿಕ ಸಮಸ್ಯೆಗಳ ಅಭಿವ್ಯಕ್ತಿಯ ದಾರಿ. ಪ್ರಸ್ತುತ ಪರಿಸ್ಥಿತಿಯಲ್ಲಿ ರಂಗಭೂಮಿ ಸಾಮಾಜಿಕ ಎಚ್ಚರದ ಕಾಲವಾಗಿದೆ ಎಂದರು.
ಇದು ರಂಗಭೂಮಿಗೆ ಸಂದಿಗ್ಧ ಸಮಯ. ಸುಳ್ಳಿನ ನಡುವೆ ಸುಳ್ಳನ್ನೆ ಹೇಳುವ ಸುಳ್ಳನ್ನೇ ಪ್ರತಿನಿಧಿಸುವ ಪ್ರಸ್ತುತ ಸನ್ನಿವೇಶ ಮತ್ತು ಮಾಧ್ಯಮಗಳ ನಡುವೆ ನಾವು ಎತ್ತಸಾಗಬೇಕು. ಯಾವ ಸೈದ್ಧಾಂತಿಕ ಹಿನ್ನೆಲೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಗಮನಿಸಬೇಕು ಎಂದು ಯೋಚಿಸಲೂ ಆಗದ ವೇಗದಲ್ಲಿ ಸಾಮಾಜಿಕ ಸ್ಥಿತ್ಯಂತರಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಅದೇ ವೇಗದಲ್ಲಿ ರಂಗಭೂಮಿಯ ಚಟುವಟಿಕೆಗಳು ತನ್ನನ್ನು ತಾನು ಪರಿಷ್ಕರಿಸಿಕೊಳ್ಳು ತ್ತಲೇ ಸಾಗಬೇಕಾಗಿದೆ ಎಂದು ಅವರು ತಿಳಿಸಿದರು.
ಕಲೆಯನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಧ್ವನಿ ಪೂರ್ಣವಾಗಿ ಹಾಗೂ ಸೂಚ್ಯಾರ್ಥದ ಮೂಲಕ ಜನರನ್ನು ತಲುಪಬೇಕು. ಕಲೆಯನ್ನು ಆಸ್ವಾದಿಸುವ ಶಿಕ್ಷಣವೇ ನಮ್ಮಲ್ಲಿಲ್ಲ. ಇವನ್ನು ದಾಟುವ ಸಾಧ್ಯತೆಗಳನ್ನು ನಾವು ಕಂಡು ಕೊಳ್ಳಬೇಕಾಗಿದೆ. ರಂಗಭೂಮಿ ಎಲ್ಲಾ ಕಲಾ ಪ್ರಕಾರಗಳನ್ನು ಒಳಗೊಂಡಿರುವ ಒಂದು ಸಂಯುಕ್ತ ಕಲೆ. ಇದನ್ನು ಮೆಚ್ಚುವ, ಪ್ರಶಂಸಿಸುವ, ಹುಡುಕಾಟ ನಡೆಸುವ ಯುವ ಪೀಳಿಗೆಯನ್ನು ತಲುಪುವುದೇ ನಮಗೆ ಇಂದಿನ ತುರ್ತಾಗಿದೆ. ಅದಕ್ಕಾಗಿ ಚಿಂತನೆಗಳು ಕಾರ್ಯಸಾಧ್ಯ ಯೋಜನೆಗಳು ರೂಪುಗೊಳ್ಳಬೇಕಾಗಿದೆ ಎಂದರು.
ಶ್ರೀರಂಗರ ದಾರಿ, ಬಿ.ವಿ ಕಾರಂತರ ಜಾತ್ರೆ, ಉತ್ಸವ, ಸಂಭ್ರಮದ ದಾರಿ. ರಂಗಭೂಮಿಯನ್ನು ಜನಸಾಮಾನ್ಯ ರಿಗೂ ತಲುಪುವಂತೆ ಮಾಡಿದ ಕಾರಂತರ ವಿನೂತನ ರಂಗಸಂಪ್ರದಾಯ ತನ್ನದೇ ಆದ ಮಿತಿಯನ್ನು ಹೊಂದಿತ್ತು. ಮುಂದೆ 80ರ ದಶಕದಲ್ಲಿ ಸಮುದಾಯದಂತಹ ಪ್ರಗತಿಪರ ಸಂಘಟನೆಗಳ ಸಾಮಾಜಿಕ ಚಳುವಳಿಯ, ಸಾಮಾಜಿಕ ಎಚ್ಚರದ ಕಾಲವಾಗಿ ತಕ್ಷಣದ ಸಾಮಾಜಿಕ ಸಮಸ್ಯೆಗಳಿಗೆ ಬೀದಿ ನಾಟಕಗಳ ವಿಶಿಷ್ಟ ವಿನ್ಯಾಸದ ಮೂಲಕ ಸಾರ್ವಜ ನಿಕರ ಗಮನಸೆಳೆಯುವ ಪ್ರಯೋಗಗಳು ನಡೆದವು. ಬ್ರೇಕ್ಟ ಮುಂತಾದ ಮಹಾನ್ ನಾಟಕಕಾರರ ನಾಟಕಗಳು ರಂಗ ಪ್ರಯೋಗಗಳಿಗೆ ಒಳಪಟ್ಟವು. ಹಾಗೆ ಮುಂದುವರಿದು ರಂಗಭೂಮಿಯನ್ನು ಗಂಭೀರವಾಗಿ ಮಾಧ್ಯಮವಾಗಿ ಶಾಸ್ತ್ರೀಯ ಅಧ್ಯಯನ ಮಾಡುವ ರಂಗಭೂಮಿ ಶಿಕ್ಷಣ ಮುನ್ನೆಲೆಗೆ ಬಂತು. ರಂಗಭೂಮಿಯನ್ನು ಅಧ್ಯಯನ ಮಾಡುವ ರಂಗಶಾಲೆಗಳು, ಶಿಬಿರಗಳು ತರಬೇತಿಗಳು ಈ ಸಂದರ್ಭದಲ್ಲಿ ನಡೆದವು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಪ್ರಾಧಿಕಾರದ ಕಾರ್ಯಯೋಜನೆಗಳನ್ನು ವಿವರಿಸಿದರು. ಕುಂದಾಪುರ ಸಮುದಾಯದ ಅಧ್ಯಕ್ಷ ಡಾ.ಸದಾನಂದ ಬೈಂದೂರು ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸಂವಾದದಲ್ಲಿ ಶಿವಮೊಗ್ಗ ಸಮುದಾಯದ ಅಧ್ಯಕ್ಷ ಡಾ. ವೆಂಕಟೇಶ್, ಪ್ರೊ.ಹಯವದನ ಉಪಾಧ್ಯ, ಆನಂದ ಭಂಡಾರಿ, ಅಶ್ವತ್ ಕುಮಾರ್, ರಾಘವೇಂದ್ರ, ವಿದ್ಯಾರ್ಥಿನಿ ಆವಂತಿ ಮೊದಲಾದವರು ಪಾಲ್ಗೊಂಡರು. ಗಣೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಾಸುದೇವ್ ಗಂಗೇರ ವಂದಿಸಿದರು.







