ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕುವುದು ನಿಷೇಧ: ಪೌರಾಯುಕ್ತ

ಉಡುಪಿ, ಸೆ.29: ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕುವುದನ್ನು ನಿಷೇಧಿಸಲಾಗುತ್ತಿದ್ದು, ಆಹಾರವನ್ನು ಹಾಕುವ ಸ್ಥಳವನ್ನು ನಿಗದಿಪಡಿಸಿ ಬೋರ್ಡ್ ಹಾಕಲಾ ಗುವುದು ಎಂದು ಪೌರಾಯುಕ್ತ ಮಹೇಶ್ ಹಂಗರಗಿ ತಿಳಿಸಿದ್ದಾರೆ.
ಉಡುಪಿ ನಗರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೀದಿ ನಾಯಿಗಳ ನಿಯಂತ್ರಣ, ರೇಬಿಸ್ ಲಸಿಕಾ ಕಾರ್ಯಕ್ರಮ, ಸಂತಾನಹರಣ ಶಸ್ತ್ರ ಚಿಕಿತ್ಸೆ ಯೋಜನೆ ಬಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಎಬಿಸಿ ಕಾರ್ಯಕ್ರಮಕ್ಕೆ ಆನೇಕ ಬಾರಿ ಟೆಂಡರ್ ಕರೆದರೂ ಯಾರೂ ಭಾಗವಹಿಸಿಲ್ಲ. ಹೀಗಾಗಿ ಸ್ಥಳಿಯ ಎನ್‌ಜಿಒ ಜೊತೆ ಸೇರಿಕೊಂಡು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸ ಲಾಗುವುದು ಎಂದು ಅವರು ಹೇಳಿದರು.
ಪರಿಸರ ಇಂಜಿನಿಯರ್ ರವಿಪ್ರಕಾಶ್ ಮಾತನಾಡಿ, ಪಾದಚಾರಿ ಮಕ್ಕಳು, ಇಳಿವಯಸ್ಕರಿಗೆ ಬೀದಿನಾಯಿಗಳಿಂದ ಬಹಳಷ್ಟು ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿವೆ. ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂರ್ಷ ತಡೆಗಟ್ಟುವುದು ನಗರಸಭೆ ಜವಾಬ್ದಾರಿಯಾಗಿವೆ ಎಂದರು.
ನಗರಸಭಾ ಸದಸ್ಯ ಗಿರೀಶ್ ಅಂಚನ್ ಮಾತನಾಡಿ, ನಗರಸಭೆ ಸುತ್ತಮುತ್ತ 2ಕ್ಕಿಂತ ಹೆಚ್ಚು ನಾಯಿಗಳನ್ನು ಸಾಕು ತ್ತಿರುವವರು ನೋಂದಣಿ ಮಾಡಿ ಕೊಳ್ಳುವಂತೆ ನಿಯಮ ರೂಪಿಸಬೇಕು. ಹೆಣ್ಣು ನಾಯಿಗಳನ್ನು ಬೀದಿಗೆ ಬಿಡುವ ಮುನ್ನ ಸಂತಾನಶಸ್ತ್ರ ಚಿಕಿತ್ಸೆ ಕಡ್ಡಾಯ ಮಾಡುವಂತೆ ಸಲಹೆ ನೀಡಿದರು.
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಯಡ್ಡಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಜಯ ಕೊಡವೂರು, ಜಿ.ಟಿ.ಹೆಗ್ಡೆ, ಮಂಜುನಾಥ್ ಮಣಿಪಾಲ ಮೊದಲಾದ ವರು ಉಪಸ್ಥಿತರಿದ್ದರು.







