ಸಮಾಜ ಹಿರಿಯ ನಾಗರಿಕರ ಬದುಕಿಗೆ ಆತ್ಮಸ್ತೈರ್ಯ ತುಂಬಬೇಕು: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಅ.4: ಅನುಭವದಿಂದ, ವಯಸ್ಸಿನಿಂದ ಮಾಗಿದ ಹಿರಿಯ ನಾಗರಿಕರು ಸಮಾಜದ ಮಾರ್ಗದರ್ಶಕರು. ಸಮಾಜ ಅವರ ಬದುಕಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರಿಕರ ಸಂಸ್ಥೆಗಳು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲೆಯ ವೃದ್ಧಾಶ್ರಮ ಗಳು ಮತ್ತು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಗಳ ಇವರ ಸಂಯುಕ್ತ ಆಶ್ರಯದಲ್ಲಿ ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ಶನಿವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿರಿಯ ನಾಗರಿಕರನ್ನು ಗೌರವಿಸುವ ಜೊತೆಗೆ, ವೃದ್ಧಾಪ್ಯದ ಕಾಲದಲ್ಲಿ ಅವರನ್ನು ಕಾಡುವ ಏಕಾಂಗಿತನ, ಅಭದ್ರತೆ, ಆರೋಗ್ಯ ಸಮಸ್ಯೆಗಳನ್ನು ಅರಿತು ಅವರ ಬದುಕಿಗೆ ಆಸರೆ ಮತ್ತು ಚೈತನ್ಯ ನೀಡುವ ನಿಟ್ಟಿನಲ್ಲಿ ಸಮಾಜವೂ ಮುಂದಾಗಬೇಕು ಎಂದು ಅವರು ಹೇಳಿದರು.
ಅವಿಭಕ್ತ ಕುಟುಂಬಗಳಿದ್ದ ಕಾಲದಲ್ಲಿ ಹಿರಿಯರು ಮಕ್ಕಳು-ಮೊಮ್ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಆದರೆ ಇಂದಿನ ಆಧುನಿಕ ಕಾಲದಲ್ಲಿ ಯುವ ತಲೆಮಾರು ಉದ್ಯೋಗ ನಿಮಿತ್ತ ದೇಶ-ವಿದೇಶಗಳಲಿದ್ದು, ಹಿರಿಯರು ಒಂದೋ ಏಕಾಂಗಿ ಜೀವನ ನಡೆಸುತ್ತಿರುತ್ತಾರೆ ಇಲ್ಲಾ ವೃದ್ಧಾಶ್ರಮ ಸೇರಿರು ತ್ತಾರೆ ಎಂದರು.
ಇಂದು ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿರುವ ಹಿರಿಯರು ಹೆಚ್ಚು ಸಮಸ್ಯೆಗಳನ್ನು ಅನುಭವಿಸುತ್ತಿರು ತ್ತಾರೆ. ಸಮಾಜದ ಕೊಂಡಿಯಾಗಿದ್ದ ಹಿರಿಯರ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಕ್ರಮಗಳು ಆಯೋಜಿಸ ಬೇಕು. ಹಿರಿಯರ ಪಾಲನೆ-ಪೋಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಗಳು ನಡೆಯಬೇಕು ಎಂದು ಕೋಟ ಹೇಳಿದರು.
ತಮ್ಮ 90ನೇ ಪ್ರಾಯದಲ್ಲಿ ತೆರೆದ ವೇದಿಕೆಯಲ್ಲಿ ಯಕ್ಷಗಾನ ಕುಣಿತದ ಪ್ರಾತ್ಯಕ್ಷಿಕೆ ತೋರಿಸಿದ ಕೋಟ ಶಿವರಾಮ ಕಾರಂತರ ಜೀವನದಿಂದ ಪ್ರೇರಣೆ ಪಡೆದು ಹಿರಿಯರು ಬದುಕನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎಂದು ಸಂಸದ ಕೋಟ, ಕೋವಿಡ್ ಬಳಿಕ ಸ್ಥಗಿತವಾಗಿದ್ದ ಹಿರಿಯರಿಗಾಗಿಯೇ ಮೀಸಲಾಗಿದ್ದ ರೈಲ್ವೆ ಟಿಕೆಟ್ ದರದಲ್ಲಿನ ರಿಯಾಯತಿ ಯನ್ನು ಮರಳಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.
ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಯುವ ಜನತೆಗಿಂತ ಹೆಚ್ಚು ಜ್ಞಾನ ಮತ್ತು ಅನುಭವ ಇರುವ ಹಿರಿಯರು, ತಮ್ಮ ಅನುಭವಗಳಿಂದ ಸಮಾಜವನ್ನು ಮುನ್ನಡೆಸಬೇಕು. ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಅಳವಡಿಸಲು ಪ್ರಯತ್ನಿಸಬೇಕು. ಕಿರಿಯರು ತಮ್ಮ ಹಿರಿಯ ರನ್ನು ಗೌರವಿಸಿ ಅವರ ಜೀವನಾನುಭವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿ ಸ್ವಸ್ಥ ಸಮಾಜ ರೂಪಿಸಬೇಕು ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿದರು. ಉಡುಪಿ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ವೃದ್ದಾಪ್ಯದ ಕಾಳಜಿ ಕುರಿತು ‘60ರ ಬಳಿಕ ಮರಳಿ ಅರಳಿ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾ ಯಿತು. ಆರಂಭದಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್, ಜಿಪಂ ಮುಖ್ಯ ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ, ಜಿಪಂ ಉಪಕಾರ್ಯದರ್ಶಿ ಎಸ್.ಎಸ್. ಕಾದ್ರೋಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಶಶಿಕಲಾ ತೋನ್ಸೆ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ, ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಹಿರಿಯ ನಾಗರಿಕರ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಹೆಚ್. ವಿಶ್ವನಾಥ್ ಹೆಗ್ಡೆ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ 1ರ ಡಿಜಿಎಂ ಮಹಾಮಯಾ ಪ್ರಸಾದ್, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷೆ ಮಮತಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲ ಸಿ.ಕೆ ಪ್ರಾಸ್ತಾವಿಕ ಮಾತು ಗಳೊಂದಿಗೆ ಸ್ವಾಗತಿಸಿದರೆ, ರೆಡ್‌ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.







