ಪಟ್ಟಣ ಪಂಚಾಯತ್ ಅವೈಜ್ಞಾನಿಕತೆ ರದ್ದುಪಡಿಸುವಂತೆ ಆಗ್ರಹಿಸಿ ಧರಣಿ

ಬೈಂದೂರು, ಅ.4: ಬಿಜೆಪಿ ಬೈಂದೂರು ವತಿಯಿಂದ ಪಟ್ಟಣ ಪಂಚಾಯತ್ ಅವೈಜ್ಞಾನಿಕತೆ ರದ್ದುಪಡಿಸುವಂತೆ ಆಗ್ರಹಿಸಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಧರಣಿ ಹಾಗೂ ಬೈಕ್ ರ್ಯಾಲಿಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಸೇರಿಸುವುದರಿಂದ ರೈತರಿಗೆ ತೊಂದರೆಯಾಗಿರುವುದು ಮತ್ತು ಆ ಕುರಿತು ರೈತರು ಹೋರಾಟ ನಡೆಸುತ್ತಿರುವುದು ಸ್ವಾಗತಾರ್ಹವಾಗಿದೆ. ಮೊದಲ ಆದ್ಯತೆ ರೈತರಿಗೆ ನೀಡಲಾಗು ತ್ತದೆ. ಅಕ್ರಮ -ಸಕ್ರಮ ಅದಾಲತ್ ಮೂಲಕ 94ಸಿ ಮತ್ತು ಬಾಕಿ ಉಳಿದಿರುವ ಖಡತ ವಿಲೇವಾರಿಗೆ ಚುರುಕಾಗಿ ಕ್ರಮಗೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ರೈತರ ನ್ಯಾಯಯುತ ಬೇಡಿಕೆಗೆ ನಮ್ಮ ಸಂಪೂರ್ಣ ಸಹಕಾರ ವಿದೆ ಎಂದರು.
ಬೈಂದೂರು ಸೇನೇಶ್ವರ ದೇವಸ್ಥಾನದಿಂದ ತಾಲೂಕು ಆಡಳಿತ ಸೌಧದ ವರೆಗೆ ಜಾಥಾ ನಡೆಸಲಾಯಿತು. ಬಳಿಕ ಬೈಂದೂರು ತಹಶೀಲ್ದಾರ ಎಸ್.ರಾಮಚಂದ್ರಪ್ಪ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕುಮ್ಕಿ ಹೋರಾಟಗಾರ ಎಂ.ಪಿ ಸತ್ಯನಾರಾಯಣ ಭಟ್, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ., ಶಿವರಾಜ ಪೂಜಾರಿ, ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲ ಪೂಜಾರಿ ವಸ್ರೆ, ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಬೇಲೆಮನೆ, ಜೈಸನ್ ಮದ್ದೋಡಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕರಣ್ ಪೂಜಾರಿ ವಂದಿಸಿದರು.
ರಾಜಕೀಯಕ್ಕೆ ವಿರೋಧ: ಮಾತಿನ ಚಕಮಕಿ
ಬಿಜೆಪಿ ನೇತೃತ್ವದ ಪ್ರತಿಭಟನೆಯ ಬಳಿಕ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಅಲ್ಲೇ ಸಮೀಪ ರೈತ ಸಂಘದ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಧರಣಿ ವೇದಿಕೆಗೆ ಭೇಟಿ ನೀಡಿ ರೈತರ ಜೊತೆ ಮಾತನಾಡಿ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಬಿಜೆಪಿ ಚಿಹ್ನೆ ಇರುವ ಶಾಲನ್ನು ಧರಿಸಿ ವೇದಿಕೆಗೆ ಬಂದಿರುವು ದನ್ನು ರೈತರು ಖಂಡಿಸಿದರು ಮತ್ತು ರೈತರ ವೇದಿಕೆಯಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದವಿಲ್ಲ ಎಂದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.







