ಮಲ್ಪೆ ಬೀಚ್‌ನಲ್ಲಿ ಟೂರಿಸ್ಟ್‌ಗಳ ದಂಡು: ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಪ್ರವಾಸಿಗರು; ಜೀವರಕ್ಷಕರ ಕೊರತೆ

ಮಲ್ಪೆ, ಅ.4: ರಜೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಕಡಲಿನ ಅಪಾಯ ಅರಿಯದ ಹೊರ ಜಿಲ್ಲೆ ಹಾಗೂ ರಾಜ್ಯದ ಪ್ರವಾಸಿಗರು ಹುಚ್ಚಾಟಕ್ಕೆ ಸಮುದ್ರಪಾಲಾಗಿ ಜೀವ ಕಳೆದು ಕೊಳ್ಳುತ್ತಿದ್ದಾರೆ. ಇವರನ್ನು ರಕ್ಷಿಸ ಬೇಕಾದ ಜೀವರಕ್ಷಕರ ಕೊರತೆ ಕೂಡ ಬೀಚ್‌ನಲ್ಲಿ ಕಾಡುತ್ತಿದೆ.
ದಸರಾ ರಜೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ವಿಪರೀತ ಹೆಚ್ಚಳವಾಗಿದೆ. ಅದರಲ್ಲೂ ಮಲ್ಪೆ ಬೀಚ್‌ನಲ್ಲಿ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಪ್ರತಿದಿನ ಆಗಮಿಸುತ್ತಿದ್ದಾರೆ. ಮಕ್ಕಳು, ಮಹಿಳೆ ಯರು, ಯುವಕರು ಸೇರಿದಂತೆ ಎಲ್ಲರೂ ಕೂಡ ನೀರಿನೊಂದಿಗೆ ಆಟ ಆಡುತ್ತ ಮೈಮರೆಯುತ್ತಿದ್ದಾರೆ. ಜೀವರಕ್ಷಕರು ಎಚ್ಚರಿಸಿದರೂ ಯಾರು ಕೂಡ ಕಿವಿಗೊಡುತ್ತಿಲ್ಲ. ಹೀಗಾಗಿ ಪ್ರತಿದಿನ ಒಂದಲ್ಲ ಒಂದು ಅನಾಹುತ ಇಲ್ಲಿ ಸಂಭವಿಸುತ್ತಲೇ ಇದೆ.
ಈಗ ಸಮುದ್ರ ಕೂಡ ಪ್ರಕ್ಷುಬ್ಧಗೊಂಡಿವೆ. ಅಬ್ಬರದ ಅಲೆಗಳೊಂದಿಗೆ ಸೆಲ್ಫಿ ಹಾಗೂ ರೀಲ್ಸ್ ಮಾಡುವ ಹುಚ್ಚಿಗೆ ಯುವಕರು ಮುಂದಾಗುತ್ತಿರುವ ದೃಶ್ಯ ಬೀಚ್‌ನಲ್ಲಿ ಕಂಡುಬರುತ್ತಿವೆ. ಅಪಾಯ ಲೆಕ್ಕಿಸದೆ ಆಳದ ಪ್ರದೇಶದವರೆಗೂ ಪ್ರವಾಸಿಗರು ತೆರಳಿ ಸಂಭ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವರು ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡ ಘಟನೆಗಳು ವರದಿಯಾಗಿವೆ. ಇದೇ ರೀತಿ ಶುಕ್ರವಾರ ಬೀಚ್‌ಗೆ ಬಂದ ಹಾಸನದ ಯುವಕರು ಸಮುದ್ರಕ್ಕೆ ಆಳಕ್ಕೆ ತೆರಳಿ ಅಲೆಗಳೊಂದಿಗೆ ಹುಚ್ಚಾಟ ನಡೆಸಿ ಪ್ರಾಣ ಕಳೆದುಕೊಂಡಿದ್ದಾರೆ.
‘ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವಾಗ ಕೇವಲ ಮೂರು ಮಂದಿ ಜೀವರಕ್ಷಕರು ಇದ್ದಾರೆ. ಇಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ಜಿಲ್ಲಾಡಳಿತ ಹೊಣೆಯಾಗುತ್ತದೆ. ಪ್ರವಾಸಿಗರ ಸುರಕ್ಷತೆ ಕಾಪಾಡಬೇಕಾ ಗಿರುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಇದೆಲ್ಲ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮೊದಲೇ ಯೋಚನೆ ಮಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ತಿಳಿಸಿದ್ದಾರೆ.
ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ!
ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುವ ಹಾಗೂ ಅಪಾಯಕಾರಿ ಸ್ಥಳ ವಾಗಿರುವ ಮಲ್ಪೆ ಬೀಚ್‌ನಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ತಕ್ಷಣಕ್ಕೆ ಜನರನ್ನು ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುವ ಯಾವುದೇ ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ.
ಇಲ್ಲಿ ಪ್ರತಿದಿನ ಏನಾದರೂ ಅನಾಹುತಗಳು ಸಂಭವಿಸುತ್ತಲೇ ಇದೆ. ಆದುದರಿಂದ ಅಗತ್ಯವಾಗಿ 108 ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲಿ ಕಲ್ಪಿಸಬೇಕು. ಅದೇ ರೀತಿ ಅಸ್ವಸ್ಥರಾದವರ ಪ್ರಾಣ ಉಳಿಸಲು ಅಂಬುಲೆನ್ಸ್‌ನಲ್ಲಿ ಕೊಂಡೊಯ್ಯಲು ಸರಿಯಾದ ರಸ್ತೆ ನಿರ್ಮಿಸಬೇಕು. ರಸ್ತೆ ಸರಿ ಇಲ್ಲದೆ ಅಂಬುಲೆನ್ಸ್ ಚಲಾಯಿಸಲು ಕೂಡ ಭಯವಾಗುತ್ತದೆ. ಅಲ್ಲದೆ ಟ್ರಾಫಿಕ್ ಸಮಸ್ಯೆ ಕೂಡ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದೆ ಎಂದು ಈಶ್ವರ ಮಲ್ಪೆ ಆರೋಪಿಸಿದರು.
ಸದ್ಯ ಮಲ್ಪೆ ಬೀಚ್‌ನಲ್ಲಿ ಐದು ಮಂದಿ ಜೀವರಕ್ಷಕರು ಹಾಗೂ ನಾಲ್ಕು ಮಂದಿ ಟೂರಿಸ್ಟ್ ಮಿತ್ರರು ಪ್ರವಾಸಿಗರ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಹೋಮ್‌ಗಾರ್ಡ್‌ಗಳನ್ನು ನೀಡುವಂತೆ ಕಮಾಂಡೆಂಟ್ ಅವರಿಗೆ ಪತ್ರ ಬರೆಯಲಾಗಿದೆ. ಅದೇ ರೀತಿ ಜಿಲ್ಲಾಧಿಕಾರಿ ಕೂಡ ಈ ಸಂಬಂಧ ಪೊಲೀಸರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಉಡುಪಿ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ವಿಂದ್ಯಾ ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಬೀಚ್‌ಗಳಿಗೆ ಬರುತ್ತಿದೆ. ನಮ್ಮಲ್ಲಿರುವ ಜೀವರಕ್ಷಕರು ಸಾಮಾನ್ಯ ದಿನಗಳ ಲ್ಲಿರುವ ಪ್ರವಾಸಿಗರನ್ನು ರಕ್ಷಿಸಲು ಸಾಕಾಗುತ್ತದೆ. ಆದರೆ ಈಗ ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುವ ಪ್ರವಾಸಿಗರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಕಳೆದ ವರ್ಷಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉಡುಪಿಗೆ ಆಗಮಿಸುತ್ತಿ ದ್ದಾರೆ. ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಕಾರ್ಯ ಮಾಡ ಲಾಗುವುದು ಎಂದರು.







