ಆರ್‌ಎಸ್‌ಎಸ್ ನಿಷೇಧಿಸಬೇಕೆಂಬುದು ಪ್ರಜಾಪ್ರಭುತ್ವವಾದಿಗಳ ಧ್ವನಿ: ಸುಂದರ ಮಾಸ್ಟರ್

ಉಡುಪಿ, ಅ.14: ಸರಕಾರಿ ಸ್ವಾಮ್ಯದ ಸ್ಥಳಗಳಲ್ಲಿ ಹಾಗೂ ಸರಕಾರದ ಅಧೀನ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಿಷೇಧಿಸ ಬೇಕೆಂಬ ಬಿ.ಕೆ.ಹರಿಪ್ರಸಾದ್ ಮತ್ತು ಪ್ರಿಯಾಂಕ ಖರ್ಗೆ ಅವರ ಹೇಳಿಕೆ ನಿಜಕ್ಕೂ ಸ್ವಾಗತಾರ್ಹ. ಒಂದು ನೊಂದಣಿಯೇ ಆಗದ ಸಂಘಟನೆಯ ಭಯೋತ್ಪಾದಕ ಕಾರ್ಯಕ್ರಮಗಳನ್ನು ನಿಷೇಧಿಸಬೇಕು ಎಂಬುದು ಈ ದೇಶದ ಪ್ರಜಾಪ್ರಭುತ್ವವಾದಿಗಳ ಧ್ವನಿಯಾಗಿದೆ ಎಂದು ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಹೇಳಿದ್ದಾರೆ.
ಸಂವಿಧಾನ ವಿರೋಧಿ, ರಾಷ್ಟ್ರ ಧ್ವಜ ವಿರೋಧಿ, ಸಮಾನತೆ ವಿರೋಧಿ ಆರ್‌ಎಸ್‌ಎಸ್‌ಗೆ ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಲಾಠಿ ಹಿಡಿದು ಪಥ ಸಂಚಲನ ಮಾಡಲು ಅನುಮತಿ ಮಾಡಿಕೊಟ್ಟಿರುವುದು ನಾಚಿಕೆಗೇಡಿನ ಸಂಗತಿಯೇ ಸರಿ. ಅಷ್ಟಕ್ಕೂ ನೂರು ವರ್ಷ ತುಂಬಿದ ಆರ್‌ಎಸ್‌ಎಸ್ ಈ ಪ್ರಜಾಪ್ರಭುತ್ವ ದೇಶಕ್ಕಾಗಿ ಮಾಡಿದ ಒಳ್ಳೆಯ ಕೆಲಸವಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ಈ ಭಾರತ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಆರ್‌ಎಸ್‌ಎಸ್‌ನ ಪಾತ್ರವೇನು? ಒಬ್ಬನೇ ಒಬ್ಬ ಆರ್‌ಎಸ್‌ಎಸ್ ಧುರೀಣ ಭಾರತದ ಸ್ವಾತಂತ್ಯಕ್ಕಾಗಿ ಪ್ರಾಣ ತೆತ್ತಾ ಉದಾಹರಣೆ ಇದೆಯೇ? ಭಾರತದ ಸ್ವಾತಂತ್ರ್ಯ ಚಳುವಳಿಯ ಸಂಧರ್ಭದಲ್ಲಿ ಬ್ರಿಟೀಷರ ಪರವಾಗಿ ಕೆಲಸ ಮಾಡುತ್ತೇವೆ ಎಂದು ತಪ್ರೋಪ್ಪಿಗೆ ಪತ್ರ ಬರೆದುಕೊಟ್ಟ ಸಂತಾನದವರು ಈಗ ದೇಶ ಭಕ್ತಿಯ, ರಾಷ್ಟ್ರ ಪ್ರೇಮದ ಬುರುಡೆ ಬಿಡುತ್ತಾರೆ. ಅದೂ ಅಲ್ಲದೇ ತಮ್ಮ ಮಕ್ಕಳಿಗೆ ಚಡ್ಡಿ ತೊಡಿಸಿ ಲಾಠಿ ಕೊಡಿಸದ ನಾಯಕರು, ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸುತ್ತಾ ಓಬಿಸಿಗಳಿಗೆ ಚಡ್ಡಿ ಹಾಕಿಸಿ ಲಾಠಿ ಕೊಡಿಸಿ, ಕೇಸು ಹಾಕಿಸಿಕೊಂಡು ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತಿದ್ದಾರೆ.
ದೆಹಲಿಯಲ್ಲಿ ಇರುವ ಹುತಾತ್ಮ ಸ್ಮಾರಕದಲ್ಲಿ ಮುಸ್ಲಿಮರ ಹೆಸರು ಕೆತ್ತಿದೆಯೇ ಹೊರತು ಒಬ್ಬನೇ ಒಬ್ಬ ಆರ್‌ಎಸ್‌ಎಸ್ ನವನ ಹೆಸರು ಇಲ್ಲ. ಈ ದೇಶದಲ್ಲಿ ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿದ ಪ್ರಯುಕ್ತ ಸರಕಾರಿ ನಾಣ್ಯವನ್ನು ಹೊರತಂದು ಈ ಸರಕಾರ ಈ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟ ಗಾರರಿಗೆ ಅಪಮಾನ ಮಾಡಿದೆ ಎಂದು ಅವರು ಟೀಕಿಸಿದ್ದಾರೆ.
ಸನಾತನ ಧರ್ಮವನ್ನು ಪೋಷಿಸುವ, ಚಾತುರ್ವರ್ಣವನ್ನು ಪ್ರತಿಪಾದಿ ಸುವ, ಅಸಮಾನತೆಯನ್ನು ಎತ್ತಿಹಿಡಿಯುವ, ಬ್ರಾಹ್ಮಣ್ಯವೇ ಶ್ರೇಷ್ಠ ಎಂದು ಘೋಷಿಸುವ ಆರ್‌ಎಸ್‌ಎಸ್ ಎಂದೂ ಈ ದೇಶದ ಬಹುಸಂಖ್ಯಾತರ ಆಶೋತ್ತರ ಗಳನ್ನು ಎತ್ತಿ ಹಿಡಿದ ಉದಾಹರಣೆಗಳಿಲ್ಲ. ಈ ಸಮಾಜದಲ್ಲಿ ತಮ್ಮ ಬ್ರಾಹ್ಮಣ್ಯದ ಮೇಲರಿಮೆಯನ್ನು ಪ್ರತಿಷ್ಠಾಪಿಸಲು ಆರ್‌ಎಸ್‌ಎಸ್ ಶ್ರೂದರ ಕೈಯಿಂದಲೇ ಈ ಕೆಲಸವನ್ನು ನಾಜೂಕಾಗಿ ಮಾಡಿಸುತ್ತಿದೆ. ಬಿಜೆಪಿ ಸರಕಾರದ ಮೂಲಕ ತಮ್ಮ ಅಜೆಂಡಾಗಳನ್ನು ಕಾರ್ಯಗತಗೊಳಿಸುತ್ತಿರುವ ಆರ್‌ಎಸ್‌ಎಸ್ ತೆರೆಯ ಮರೆಯಲ್ಲೇ ಎಲ್ಲಾ ಆಟವನ್ನೂ ಆಡುತ್ತಿದೆ. ಇದನ್ನು ಶೂದ್ರರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







