ಬೀಡಿ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಧರಣಿ

ಕಾರ್ಕಳ, ಅ.14: ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸು ವಂತೆ ಆಗ್ರಹಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಗಳ ಜಂಟಿ ಕ್ರೀಯಸಮಿತಿ ನೇತೃತ್ವದಲ್ಲಿ ಮಂಗಳವಾರ ಕಾರ್ಕಳದ ಭಾರತ್ ಬೀಡಿ ಕಂಪನಿ ಮುಂದೆ ಹಕ್ಕೊತ್ತಾಯ ಚಳುವಳಿ ನಡೆಸಲಾಯಿತು.
ಧರಣಿಯುನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಬೀಡಿ ಫೆಡರೇಶನ್ ಉಪಾಧ್ಯಕ್ಷ ವಸಂತ ಆಚಾರಿ, 2018ರಿಂದ 2024ವರೆಗೆ ಬಾಕಿ ಇರುವ ಹೆಚ್ಚಳ ವಾದ ಕನಿಷ್ಟ ಕೂಲಿ 40ರೂ. ಹಾಗೂ ತುಟ್ಟಿ ಭತ್ಯೆ ಹಣ ಕೂಡಲೇ ನೀಡಬೇಕು. ಕಾರ್ಮಿಕರಿಗೆ ಕಾನೂನು ಬದ್ದ ವಾಗಿ ಸಿಗಬೇಕಾದ ತುಟ್ಟಿಭತ್ಯೆ, ಬಾಕಿ ಇಟ್ಟುಕೊಂಡಿರುವ ಕಾರ್ಮಿಕರ ಸಾವಿರಾರು ಕೋಟಿ ಹಣ ಕೂಡಲೇ ನೀಡದಿದ್ದಲ್ಲಿ ಕಂಪನಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕಾರ್ಮಿಕರು ತಯಾರಾಗಬೇಕೆಂದು ಕರೆ ನೀಡಿದರು.
ಇವತ್ತು ಭಾರತ್ ಬೀಡಿ ಮಾಲೀಕರು ಬೀಡಿ ಉದ್ಯಮದ ಹಣದಿಂದ ಬೇರೆ ಬೇರೆ ಕಂಪನಿಗಳನ್ನು ಆರಂಭಿಸಿದ್ದಾರೆ. ಬೀಡಿ ಕಾರ್ಮಿಕರು ಬೇವರು ಸುರಿಸಿ ದುಡಿದ ಹಣದಿಂದ ಭಾರತ್ ಬೀಡಿ ಮಾಲಿಕರು 30 ನಂಬರ್ ಹೆಸರಿನಲ್ಲಿ ಟೀ ಪುಡಿ ಉದ್ಯಮ ಆರಂಭಿಸಿ ವಂಚಿಸಿದ್ದಾರೆ ಎಂದು ಅವರು ದೂರಿದರು.
ಧರಣಿಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ವಹಾಬಲ ಹೊಡೆಯರಹೋಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಮುಖಂಡರಾದ ಬಲ್ಕೀಸ್, ನಳಿನಿ ಎಸ್., ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಮೋಹನ್, ನಾಗೇಶ್ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಸುನೀತಾ ಶೆಟ್ಟಿ, ಕೋಶಾಧಿಕಾರಿ ಸುಮತಿ ಎಸ್., ಮುಖಂಡರಾದ ವಿಲಾಸಿನಿ, ಶಕುಂತಲಾ, ಜಯಂತಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







