ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ರೊಬೊಟಿಕ್ ಸರ್ಜರಿ ಸೌಲಭ್ಯ ಉದ್ಘಾಟನೆ

ನವದೆಹಲಿ, ಅ.14: ಕ್ರೀಡಾಪಟುಗಳ ಗಾಯಚಿಕಿತ್ಸೆ ಹಾಗೂ ಚೇತರಿಕೆ ಪ್ರಕ್ರಿಯೆಯಲ್ಲಿ ವೈದ್ಯರು, ತರಬೇತುದಾರರು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಪಾತ್ರ ಪ್ರಮುಖವಾಗಿದ್ದು, ಭವಿಷ್ಯದಲ್ಲಿ ರೋಬೋಟಿಕ್ ಉಪಕರಣಗಳು ಹಾಗೂ ಹೊಸ ವೈದ್ಯಕೀಯ ಆವಿಷ್ಕಾರಗಳು ಕ್ರೀಡಾ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ತರಲಿವೆ ಎಂದು ಎಂದು ಒಲಿಂಪಿಕ್ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಹೇಳಿದ್ದಾರೆ.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸುಧಾರಿತ ರೊಬೊಟಿಕ್ ಸರ್ಜರಿ ಸೌಲಭ್ಯವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ತೀವ್ರ ಸಂಧಿವಾತ ಮತ್ತು ಕಾರ್ಟಿಲೇಜ್ ಹಾನಿ ಕಾರಣದಿಂದ ವೃತ್ತಿಪರ ಬ್ಯಾಡ್ಮಿಂಟನ್ ನಿಂದ ದೂರವಿರಬೇಕಾಯಿತು. ಇದರಿಂದ ಎರಡು ಗಂಟೆಗೂ ಹೆಚ್ಚು ಆಡಲು ಸಾಧ್ಯವಾಗುವುದಿಲ್ಲ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ದಿನಕ್ಕೆ ಹತ್ತು ಗಂಟೆಗಳ ತರಬೇತಿ ಅಗತ್ಯವಿದೆ ಎಂದರು.
ಭಾರತದ ಆರೋಗ್ಯ ಮತ್ತು ಕ್ರೀಡಾ ವಿಜ್ಞಾನ ಕ್ಷೇತ್ರ ವೇಗದ ಪ್ರಗತಿ ಸಾಧಿಸಿದೆ. ಈಗ ದೇಶದಲ್ಲಿ ಕ್ರೀಡಾಪಟುಗಳಿಗೆ ಉನ್ನತ ಮಟ್ಟದ ಫಿಸಿಯೋ ಥೆರಪಿ, ವ್ಯಾಯಾಮ ಕ್ರಮಗಳು ಮತ್ತು ರೋಬೋಟ್ ಸಹಾಯದ ಶಸ್ತ್ರಚಿಕಿತ್ಸೆ ಸೇರಿ ದಂತೆ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿವೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳ ಬಳಕೆ ಭಾರತದ ಕ್ರೀಡಾ ಪಟುಗಳಿಗೆ ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೆಚ್ಚು ಯಶಸ್ಸು ತಂದುಕೊಡಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಶಸ್ತ್ರಚಿಕಿತ್ಸಾ ಆಂಕೊಲಾಜಿ, ಸಾಮಾನ್ಯ ಶಸ್ತ್ರಚಿಕಿತ್ಸೆ, ಜಿಐ ಶಸ್ತ್ರಚಿಕಿತ್ಸೆ, ಒಬಿಜಿ, ಮೂತ್ರಶಾಸ್ತ್ರ ಮತ್ತು ಮೊಣಕಾಲು ಹಾಗೂ ಕೀಲು ಬದಲಿ ಕಾರ್ಯ ವಿಧಾನಗಳಲ್ಲಿ ನಿಖರತೆಯನ್ನು ಹೆಚ್ಚಿಸುವ ಮತ್ತು ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ಸುಧಾರಿತ ತಂತ್ರಜ್ಞಾನವು ರೋಗಿಗಳ ಆರೈಕೆಯಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ. ಈ ಮೂಲಕ ಕಸ್ತೂರ್ಬಾ ಆಸ್ಪತ್ರೆ ಉಡುಪಿ ಜಿಲ್ಲೆಯ ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳನ್ನು ನೀಡುವ ಮೊದಲ ಆರೋಗ್ಯ ಸಂಸ್ಥೆಯಾಗಿದೆ ಎಂದರು.
ಮಣಿಪಾಲ ಆಸ್ಪತ್ರೆಗಳ ಮಂಗಳೂರಿನ ಪ್ರಾದೇಶಿಕ ಮುಖ್ಯ ಅಧಿಕಾರಿ ಸಘೀರ್ ಸಿದ್ದಿಕಿ ಉಪಸ್ಥಿತರಿದ್ದರು. ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ.ನವೀನ ಕುಮಾರ್ ಎ.ಎನ್. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ರೋಬೋಟಿಕ್‌ನ ಮಾಹಿತಿ ನೀಡಿದರು. ಮಾಹೆ ಸಹ ಕುಲಪತಿ(ಆರೋಗ್ಯ ವಿಜ್ಞಾನ) ಡಾ.ಶರತ್ ಕೆ.ರಾವ್ ಕೀಲು ಮತ್ತು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ರೊಬೊಟಿಕ್ಸ್ ಕುರಿತು ವಿವರ ನೀಡಿದರು.
ಮಣಿಪಾಲ ಕ್ಲಸ್ಟನರ್ ಸಿಓಓ ಡಾ.ಸುಧಾಕರ್ ಕಂಟಿಪುಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಂದಿಸಿದರು.







