ಕುವೆಂಪು-ಕಾರಂತ ಸಾಂಸ್ಕೃತಿಕ ಒಡನಾಟ ಶಿಬಿರ ಉದ್ಘಾಟನೆ

ಉಡುಪಿ, ಅ.15: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಬೆಂಗಳೂರಿನ ಸಂತ ಜೋಸೆಫರ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕುವೆಂಪು- ಕಾರಂತ ಸಾಂಸ್ಕೃತಿಕ ಒಡನಾಟ ಶಿಬಿರವನ್ನು ರಥಬೀದಿ ಗೆಳೆಯರು ಅಧ್ಯಕ್ಷ ನಾಗೇಶ್ ಕುಮಾರ್ ಉದ್ಯಾವರ ಉದ್ಘಾಟಿಸಿದರು.
ಕುವೆಂಪು ಮತ್ತು ಕಾರಂತರನ್ನು ಇಂದಿನ ಯುವಜನಾಂಗ ಸರಿಯಾಗಿ ಅರ್ಥ ಮಾಡಿಕೊಂಡರೆ ಹೊಸ ರೀತಿ ಚಿಂತನೆಗೆ ತಮ್ಮನ್ನು ಒಡ್ಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಜನಾರ್ಧನ ಕೊಡವೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಉಡುಪಿಗೆ ಬಂದು ಕಾರಂತರ ಬಗ್ಗೆ ಅರಿತು ಕೊಳ್ಳುವುದು, ಕುಪ್ಪಳ್ಳಿಯಲ್ಲಿ ಕುವೆಂಪು ಅವರನ್ನು ಅರಿತುಕೊಳ್ಳುವ ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವಿಶಿಷ್ಟವಾಗಿದೆ ಎಂದು ಶ್ಲಾಘಿಸಿದರಲ್ಲದೇ ಕರಾವಳಿ ಸಂಸ್ಕೃತಿಯ ವೈಶಿಷ್ಟತೆಯ ಬಗ್ಗೆ ವಿವರಗಳನ್ನು ನೀಡಿದರು.
ಪ್ರವಾಸದ ಸಂಯೋಜಕ ಡಾ.ಲವಕುಮಾರ್ ಪ್ರವಾಸ ಮತ್ತು ಶಿಬಿರದ ಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಸದಸ್ಯ ಸತೀಶ್ ಕೊಡವೂರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.
ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿ ರಶಿತಾ ನಿರೂಪಿಸಿ, ಟ್ರಸ್ಟಿನ ಸದಸ್ಯ ಸಂತೋಷ್ ನಾಯಕ್ ಪಟ್ಲ ವಂದಿಸಿದರು.
ಶಿಬಿರದ ಅಂಗವಾಗಿ ಉಡುಪಿ ಯಕ್ಷಗಾನ ಕೇಂದ್ರ, ಕಾರಂತ ಥೀಂ ಪಾರ್ಕ್, ಕೋಟಿ ಚೆನ್ನಯ ಥೀಂ ಪಾರ್ಕ್, ಡಾ.ಎ.ಬಿ ಬಾಳಿಗ ಆಸ್ಪತ್ರೆಗಳಿಗೆ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುಪ್ಪಳಿಯಲ್ಲಿ ಕುವೆಂಪು ಅಧ್ಯಯನ ಯೋಜನೆಯನ್ನು ರೂಪಿಸಲಾಗಿದೆ.







