ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಡಿಜಿಟಲ್ ಲಾಕರ್ ಸೌಲಭ್ಯ: ಕರ್ನಾಟಕದಲ್ಲೇ ಪ್ರಥಮ

ಉಡುಪಿ: ರಾಜ್ಯದಲ್ಲೇ ಮೊದಲನೇಯದಾಗಿ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಡಿಜಿಟಲ್ ಲಾಕರ್ ಸೌಲಭ್ಯ ವನ್ನು ಕೊಂಕಣ ರೈಲ್ವೆಯ ಪ್ರಯಾಣಿಕರಿಗೆ ಒದಗಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಆಧುನಿಕ ತಂತ್ರಜ್ಞಾನದೊಂದಿಗೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಒಟ್ಟು 15 ಲಾಕರ್‌ಗಳನ್ನು ಒದಗಿಸಲಾಗಿದೆ. ರೈಲ್ವೆ ಪ್ರಯಾಣಿಕರು ಉಡುಪಿಯಲ್ಲಿ ಇಳಿದು ನಿರ್ದಿಷ್ಟ ವೇಳಾವಧಿಗೆ ಗೊತ್ತುಪಡಿಸಿದ ಶುಲ್ಕ ಪಾವತಿಸಿ ತಮ್ಮೆಲ್ಲಾ ಲಗ್ಗೇಜ್ ಗಳನ್ನು ಸುರಕ್ಷಿತವಾಗಿ ಡಿಜಿಟಲ್ ಲಾಕರ್ ವ್ಯವಸ್ಥೆಯಲ್ಲಿ ಇರಿಸಿ, ತಮ್ಮ ಕೆಲಸ ಮುಗಿಸಿಕೊಂಡು ಬಂದು ಅದನ್ನು ಕೊಂಡೊಯ್ಯಬಹುದು.
ಲಾಕರ್ ಶುಲ್ಕ: ಕೊಂಕಣ ರೈಲ್ವೆ ನಿರ್ಧರಿಸಿದಂತೆ ಸದ್ಯ ಸಣ್ಣ ಗಾತ್ರದ ಲಗ್ಗೇಜ್‌ಗೆ ಮೂರು ಗಂಟೆ ಅವಧಿಗೆ 15ರೂ., ಆರು ಗಂಟೆಗಳ ಅವಧಿಗೆ 30, 12 ಗಂಟೆಗಳ ಅವಧಿಗೆ 45 ಹಾಗೂ 24 ಗಂಟೆಗಳ ಅವಧಿಗೆ 60 ರೂ.ಆಗಿರುತ್ತದೆ.
ಮಧ್ಯಮ ಗಾತ್ರದ ಲಗ್ಗೇಜ್‌ಗೆ 3ಗಂಟೆಗೆ- 20ರೂ, 6ಗಂಟೆಗೆ-40, 12ಗಂಟೆಗೆ-60 ಹಾಗೂ 24 ಗಂಟೆಗೆ 80ರೂ. ದೊಡ್ಡ ಗಾತ್ರದ ಲಗ್ಗೇಜ್‌ಗೆ 3ಗಂಟೆಗೆ -40, 6ಗಂಟೆಗೆ- 60, 12ಗಂಟೆಗೆ- 90 ಹಾಗೂ 24 ಗಂಟೆಗೆ -120 ರೂ. ಅತಿದೊಡ್ಡ ಗಾತ್ರದ ಲಗ್ಗೇಜ್‌ಗೆ 3ಗಂಟೆಗೆ- 60, 6ಗಂಟೆಗೆ -120, 12ಗಂಟೆಗೆ- 180 ಹಾಗೂ 24 ಗಂಟೆಗೆ-240 ರೂ.ಗಳನ್ನು ನಿಗದಿ ಪಡಿಸಲಾಗಿದೆ.
ಈ ಶುಲ್ಕವು ಶೇ.18 ಜಿಎಸ್‌ಟಿಯನ್ನು ಒಳಗೊಂಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.







