ಮುಖ್ಯಮಂತ್ರಿ ಜೊತೆ ಚರ್ಚಿಸಿ ಮೃತ ಬಾಲಕರ ಕುಟುಂಬಕ್ಕೆ ನೆರವು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ, ಅ.15: ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹೊಸಹಿತ್ಲುವಿನಲ್ಲಿ ಸಮುದ್ರಕ್ಕೆ ಈಜಲು ತೆರಳಿ ಮೃತಪಟ್ಟ ಮೂವರು ಬಾಲಕರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಹೊಸಹಿತ್ಲು ಬೀಚ್‌ನಲ್ಲಿ ಮಂಗಳವಾರ ಈಜಲು ಹೋದ ಸಂಕೇತ್ (16), ಸೂರಜ್ (15), ಆಶಿಶ್ (14) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಘಟನೆ ನಡೆದ ಬೆನ್ನಲ್ಲೇ ಮಾಹಿತಿ ಸಂಗ್ರಹಿಸಿದ ಸಚಿವರು, ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಸಾವಿನ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದಿರುವ ಸಚಿವರು, ಜಿಲ್ಲೆಯಲ್ಲಿ ಇಂಥ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.
ಸಂಸದ ಬಿವೈಆರ್ ಸಂತಾಪ: ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹೊಸಹಿತ್ಲುವಿನಲ್ಲಿ ಸಮುದ್ರದಲ್ಲಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ಬಾಲಕರು ದುರ್ಮರಣ ಹೊಂದಿದ ಸುದ್ದಿ ಕೇಳಿ ತುಂಬಾ ವಿಷಾದವಾಗಿದೆ. ಅಮೂಲ್ಯವಾದ ಬಾಲಜೀವಗಳು ಹೀಗೆ ಅಕಾಲದಲ್ಲಿ ಕಳೆದುಹೋಗಿರುವುದು ಅತೀವ ಬೇಸರದ ವಿಷಯ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಹಾಗೂ ಮೃತ ಮಕ್ಕಳ ಕುಟುಂಬಗಳಿಗೆ ನನ್ನ ಸಂತಾಪವನ್ನು ತಿಳಿಸುತ್ತೇನೆ. ಈ ದುಃಖದ ಸಂದರ್ಭದಲ್ಲಿ ದೇವರು ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಎಂದು ಅವರು ಹೇಳಿದ್ದಾರೆ.







