ಇಎಸ್‌ಐ ಫಲಾನುಭವಿಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯದಿದ್ದರೆ ಡಿಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ: ಗೋಪಾಲ ಅಪ್ಪು ಕೋಟೆಯಾರ್ ಎಚ್ಚರಿಕೆ

ಉಡುಪಿ, ಅ.15: ಕಳೆದ ಆರು ತಿಂಗಳಿನಿಂದ ಕಾರ್ಮಿಕರಿಗೆ ಹಾಗೂ ಇಎಸ್‌ಐ ಫಲಾನುಭವಿಗಳಿಗೆ ಕಾರ್ಮಿಕ ವಿಮಾ ಯೋಜನೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸ್ಥಗಿತಗೊಂಡಿದ್ದು, ಮುಂದಿನ ಸೋಮವಾರದೊಳಗೆ ಉಚಚಿತ ಚಿಕಿತ್ಸೆಯನ್ನು ಪುನರಾರಂಭಿಸದಿದ್ದರೆ ಉಡುಪಿ ಜಿಲ್ಲಾದಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳುವು ದಾಗಿ ಡಿ ಕಾಮನ್ ಪೀಪಲ್ ವೆಲ್ಘೇರ್ ಫೌಂಡೇಷನ್‌ನ ಅಧ್ಯಕ್ಷ ಗೋಪಾಲಯ್ಯ ಅಪ್ಪು ಕೋಟೆಯಾರ್ ಇಎಸ್‌ಐ ಕಾರ್ಪೋರೇಷನ್‌ಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಕಳೆದ ಆರು, ಕಾರ್ಪೋರೇಷನ್‌ನೊಂದಿಗೆ ಟೈ ಅಪ್ ಆದ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಿದ ಹಣವನ್ನುಇ ಮರುಪಾವತಿಸದ ಕಾರಣ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳು ಇಎಸ್‌ಐ ಫಲಾನುಭವಿಗಳಿಗೆ ಉಚಿತ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿವೆ ಎಂದು ಅವರು ಹೇಳಿದರು.
ಆದರೆ ಜಿಲ್ಲೆಯಲ್ಲಿ ಇಎಸ್‌ಐ ಸೌಲಭ್ಯವನ್ನು ಕೇವಲ ಸೂಪರ್ ಸ್ಪೆಷಾಲಿಟಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದವರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಬಡ ಕಾರ್ಮಿಕರು, ತಮ್ಮ ಸಾಮಾನ್ಯ ಅಸೌಖ್ಯಗಳಿಗೆ ಉಚಿತ ಚಿಕಿತ್ಸೆ ನಿರೀಕ್ಷಿಸಿ ಬಂದರೆ ಅವರಿಗೆ ಚಿಕಿತ್ಸೆಯನ್ನು ನಿರಾಕರಿಸಲಾಗುತ್ತಿದೆ ಎಂದು ಖ್ಯಾತ ಮನೋರೋಗ ತಜ್ಞ ಹಾಗೂ ದೊಡ್ಡಣ ಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.
ಜಿಲ್ಲೆಯ ಕೆಎಂಸಿ ಮಣಿಪಾಲ ಸೇರಿದಂತೆ ಎಲ್ಲಾ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡುವ ಸೌಲಭ್ಯವನ್ನು ನಿಲ್ಲಿಸಿ ಬಿಟ್ಟಿವೆ. ಈಗೇನಾದರೂ ಸಮಸ್ಯೆ ಎದುರಾದರೆ, ಕಾರ್ಮಿಕರು ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯ ಬೇಕಾಗಿದೆ. ತಮ್ಮ ಪರಿಚಯದ ವ್ಯಕ್ತಿಯೊಬ್ಬರು ತುರ್ತು ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ತೆರಳಿದಾಗ ಈ ವಿಷಯ ತಮಗೆ ತಿಳಿಯಿತು. ಕೇವಲ ಸೂಪರ್ ಸ್ಪೆಷ್ಪಾಲಿಟಿ ಸಮಸ್ಯೆಗಳಿಗೆ ಮಾತ್ರ ನಗದು ರಹಿತ ಚಿಕಿತ್ಸೆ ಸೌಲಭ್ಯವಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ ಎಂದರು.
ಇಎಸ್‌ಐ ಫಲಾನುಭವಿಗಳಿಗೆ ಇನ್ನು ಉಳಿದಿರುವುದು ಸರಕಾರಿ ಆಸ್ಪತ್ರೆಗಳು ಮಾತ್ರ. ಅಲ್ಲಿ ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುವುದು ಗ್ಯಾರಂಟಿ ಇರುವುದಿಲ್ಲ. ಈ ಬಗ್ಗೆ ನಮ್ಮ ಕಾರ್ಮಿಕ ಸಚಿವರು ಕೂಡಲೇ ಗಮನ ಹರಿಸ ಬೇಕಾಗಿದೆ. ಜನಸಾಮಾನ್ರು ಎಚ್ಚೆತ್ತುಕೊಂಡು ತಮ್ಮ ಹಕ್ಕುಗಳಿಗಾಗಿ ಬೀದಿ ಗಿಳಿದು ಪ್ರತಿಭಟಿಸದಿದ್ದರೆ, ಈ ಸಮಸ್ಯೆ ಇನ್ನೂ ಮುಂದುವರಿಯುವುದು ಖಂಡಿತ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದರು.
ಇಎಸ್‌ಐ ಹಾಗೂ ಪಿಎಫ್ ಸಮಸ್ಯೆಗಳ ಕುರಿತು, ಕಾರ್ಮಿಕರ ಹಕ್ಕುಗಳ ಕುರಿತು ಕಳೆದ ಐದು ದಶಕಗಳಿಂದ ಹಲವು ಹೋರಾಟಗಳನ್ನು ನಡೆಸುತಿರುವ ಜಿ.ಎ.ಕೋಟೆಯಾರ್ ಅವರು, ಈಗಲೂ ಸಮಸ್ಯೆಗಳ ತಮ್ಮ ಗಮನಕ್ಕೆ ಬಂದಾಗ ಈ ಬಗ್ಗೆ ಧ್ವನಿ ಎತ್ತುತ್ತಾರೆ. ಈಗಲೂ ತಾವು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರದ ಸಂಬಂಧಿತ ಸಚಿವರಿಗೆ, ಸಂಸದರಿಗೆ, ಶಾಸಕರಿಗೆ ಪತ್ರ ಬರೆದು ಸಮಸ್ಯೆ ಬಗ್ಗೆ ಅವರ ಗಮನ ಸೆಳೆದಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಎಸ್‌ಐ ಟೈಅಪ್ ಆದ ಎಲ್ಲಾ ಆಸ್ಪತ್ರೆಗಳು ಕಾರ್ಮಿಕ ವಿಮಾ ಯೋಜನೆಯ ಫಲಾನುಭವಿಗಳಿಗೆ ಹಾಗೂ ಸದಸ್ಯರಿಗೆ ನೀಡುವ ಚಿಕಿತ್ಸೆಯನ್ನು ನಿಲ್ಲಿಸಿವೆ. ಇಎಸ್‌ಐ ಕಾರ್ಪೋರೇಷನ್ ಕಳೆದ ಆರು ತಿಂಗಳಿನಿಂದ ಬಾಕಿ ಉಳಿದ ಹಣವನ್ನು ಮರುಪಾವತಿಸಿಲ್ಲ. ಕಾರ್ಮಿಕರೇ ನೀಡಿದ ಹಣ ಕಾರ್ಪೋರೇಷನ್ ಬಳಿ ಇದೆ. ಆ ಹಣವನ್ನು ಟೈಅಪ್ ಆಸ್ಪತ್ರೆಗಳಿಗೆ ನೀಡದೇ ಇದ್ದಲ್ಲಿ, ನಮ್ಮ ಕಾರ್ಮಿಕರಿಗೆ ತೊಂದರೆಯಾದಲ್ಲಿ ತಾವು ಮತ್ತೆ ಉಪವಾಸ ಸತ್ಯಾಗ್ರಹಕ್ಕೆ ಇಳಿಯುವುದು ಖಂಡಿತ ಎಂದವರು ತಿಳಿಸಿದರು.







