ಅರಬಿಸಮುದ್ರದಲ್ಲಿ ವಾಯುಭಾರ ಕುಸಿತ: ಕರಾವಳಿಯಲ್ಲಿ ಒಂದು ವಾರ ಮಳೆಯ ಮುನ್ಸೂಚನೆ

ಉಡುಪಿ, ಅ.17: ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆ ಯಂತೆ ಪಶ್ಚಿಮದ ಅರಬಿಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರ ಕಾಲ ಸಮುದ್ರ ಪ್ರಕ್ಷುಬ್ದತೆಯಿಂದ ಕೂಡಿರಲಿದ್ದು, ಈ ದಿನಗಳಲ್ಲಿ ಗಂಟೆಗೆ 45ರಿಂದ 55 ಕಿ.ಮೀ. ವೇಗದ ಗಾಳಿಯೊಂದಿಗೆ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಸಮುದ್ರದಲ್ಲಿ ಎತ್ತರದ ಅಲೆಗಳು ಏಳಲಿದ್ದು, ದಡವನ್ನು ಅಪ್ಪಳಿಸುವ ಸಾದ್ಯತೆ ಇದೆ. ಈ ಹಿನ್ನೆಲೆ ಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರು ಹಾಗೂ ಅಧಿಕಾರಗಳಿಗೆ ಕೆಲವೊಂದು ಮುನ್ನೆಚ್ಚರಿಕೆ ಹಾಗೂ ಸೂಚನೆಗಳನ್ನು ನೀಡಿದೆ.
ಸಾರ್ವಜನಿಕರು, ಪ್ರವಾಸಿಗರು, ಮೀನುಗಾರರು ಸಮುದ್ರ ಹಾಗೂ ನದಿಗಳಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸ ಬೇಕು. ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಸಾಧ್ಯವಿದ್ದಷ್ಟು ಬೇಗ ಸುರಕ್ಷಿತ ದಡವನ್ನು ಸೇರಬೇಕು. ತುರ್ತುಸೇವೆಗೆ ಶುಲ್ಕ ರಹಿತ 1077 ಅಥವಾ ದೂರವಾಣಿ ಸಂಖ್ಯೆ: 0820-2574802ನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.





