ಮೊದಲು ಬಾಕಿ ಇರುವ ಜಿಪಂ, ತಾಪಂ ಚುನಾವಣೆ ನಡೆಸಿ: ಸಚಿವ ಪ್ರಿಯಾಂಕ್ ಖರ್ಗೆಗೆ ಸಂಸದ ಕೋಟ ಸವಾಲು

ಉಡುಪಿ, ಅ.16: ಈ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾದವು. ಬಾಕಿ ಇರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಮಾಡಲು ಮೊದಲು ಗಮನ ಹರಿಸಿ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಆರ್‌ಎಸ್‌ಎಸ್‌ನ್ನು ಟೀಕಿಸಿ ದೇಶಾದ್ಯಂತ ಸುದ್ದಿಯಾ ಗಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ.
ಉಡುಪಿಯಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟ, ಮೀಸಲಾತಿ ಕುರಿತು ಇದ್ದ ಗೊಂದಲದ ಕಾರಣಕ್ಕಾಗಿ ಇದುವರೆಗೆ ಚುನಾವಣೆ ನಡೆದಿರಲಿಲ್ಲ. ಇದೀಗ ಮೀಸಲಾತಿ ಗೊಂದಲ ಪರಿಹಾರ ಆದ ಮೇಲೂ ಗಮನ ಹರಿಸಿಲ್ಲ. ಸರಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷವಾದರೂ ಗ್ರಾಮೀಣಾಭಿವೃದ್ಧಿ ಇಲಾಖೆ ಚುನಾವಣೆ ಕುರಿತು ಗಮನವನ್ನು ನೀಡಿಲ್ಲ ಎಂದವರು ಟೀಕಿಸಿದರು.
ಹೀಗಾಗಿ ತಕ್ಷಣ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ನಡೆಸಬೇಕು ಎಂದು ಹೇಳಿದ ಕೋಟ, ತೀರ್ಪಿನ ಗೊಂದಲ ಪರಿಹಾರ ಆಗಿದೆ. ಹೀಗಾಗಿ ಚುನಾವಣೆ ಮುಂದೂಡಲು ಯಾವುದೇ ಕಾರಣಗಳಿಲ್ಲ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾಪಂ ಹಾಗೂ ಜಿಪಂ ಸದಸ್ಯರಿಗೆ ಜನರ ಸಮಸ್ಯೆ ಬಗಿಹರಿಸಲು ಅವಕಾಶ ಇಲ್ಲದಂತಾಗಿದೆ. ತ್ರಿಸ್ತಕ ವ್ಯವಸ್ಥೆಗೆ ಇದರಿಂದ ಧಕ್ಕೆಯಾಗಿದೆ. ಸರಕಾರ ಜನತಂತ್ರ ವ್ಯವಸ್ಥೆಯನ್ನು ನಿರ್ಲಕ್ಷಿಸಿದೆ ಎಂದರು.
ಚುನಾವಣೆಯನ್ನು ನಡೆಸಲು ಆದ್ಯತೆ ನೀಡುವ ಬದಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ನಿಯಂತ್ರಣ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆಯುತಿದ್ದಾರೆ ಎಂದು ಟೀಕಿಸಿದ ಕೋಟ ಶ್ರೀನಿವಾಸ ಪೂಜಾರಿ, ಗ್ರಾಮೀಣಾಭಿವೃದ್ಧಿ ಸಚಿವರೇ ಮೊದಲು ಗ್ರಂಥಪಾಲಕರ ಸಮಸ್ಯೆ ಬಗೆಹರಿಸಿ ಎಂದು ಕರೆ ನೀಡಿದರು.
ಗ್ರಂಥಪಾಲಕರಿಗೆ ವೇತನವನ್ನು 19,000 ರೂ.ಗೆ ಏರಿಸಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಇದು ಸಚಿವರ ವೈಯಕ್ತಿಕ ಟೀಕೆಯಲ್ಲ, ವಿಷಯದ ಮೇಲೆ ಮಾಡುತ್ತಿರುವ ಆಕ್ಷೇಪ ಎಂದರು.
ಸಂಪುಟದ ಸಚಿವರನ್ನು ಕರೆದು ಬುದ್ಧಿ ಹೇಳಿ ಎಂದು ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಸಲಹೆ ನೀಡಿದರು. ಆರ್‌ಎಸ್‌ಎಸ್ ನಿಯಂತ್ರಣ ನಿಮಗೆ ಸಾಧ್ಯವಾಗದಿರುವ ಕೆಲಸ. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿಯವರಿಗೆ ಆಗದ ಕೆಲಸ ನಿಮ್ಮಿಂದ ಸಾಧ್ಯವಿಲ್ಲ ಎಂದರು.







