ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಮತ್ತಿಬ್ಬರು ಸಾಕ್ಷಿಗಳ ವಿಚಾರಣೆ- ಪಾಟಿಸವಾಲು

ಪ್ರವೀಣ್ ಚೌಗಲೆ
ಉಡುಪಿ, ಅ.17: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಎರಡು ಸಾಕ್ಷಿಗಳ ಪಾಟಿ ಸವಾಲು ಇಂದು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಯಿತು.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ಸಾಕ್ಷಿಗಳಾದ ಆರೋಪಿಯನ್ನು ನೇಜಾರಿನಿಂದ ಸಂತೆಕಟ್ಟೆಯವರೆಗೆ ಬೈಕಿನಲ್ಲಿ ಕರೆದುಕೊಂಡು ಹೋದ ಬೈಕ್ ಸವಾರ ಶಿವಕುಮಾರ್ ಹಾಗೂ ನೇಜಾರಿನಿಂದ ಕರಾವಳಿ ಬೈಪಾಸ್ವರೆಗೆ ರಿಕ್ಷಾದಲ್ಲಿ ಕರೆದುಕೊಂಡು ಹೋದ ರಿಕ್ಷಾ ಚಾಲಕ ರಘುನಾಥ ಪೂಜಾರಿ ಯನ್ನು ಮುಖ್ಯ ವಿಚಾರಣೆಗೆ ಒಳಪಡಿಸಿ ದ್ದರು. ಇಂದು ಆರೋಪಿ ಪರ ವಕೀಲ ರಾಜು ಪೂಜಾರಿ ಅವರಿಬ್ಬರು ಸಾಕ್ಷಿಗಳನ್ನು ಪಾಟಿಸವಾಲಿಗೆ ಒಳಪಡಿಸಿದರು.
ಪ್ರಕರಣದ ದೂರುದಾರೆ ಐಫಾ, ಆಕೆಯ ತಾಯಿ ಶಾಹಿನ್ ಬೀಬಿ ಮತ್ತು ಆಟೋ ರಿಕ್ಷಾ ಚಾಲಕ ಶ್ಯಾಮ್ ಅವರ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ಈ ಹಿಂದೆ ಪೂರ್ಣಗೊಂಡಿತ್ತು. ಹೀಗೆ ಒಟ್ಟು ಐದು ಸಾಕ್ಷಿಗಳ ವಿಚಾರ ಮುಗಿದಿದೆ.
ಇನ್ನು ನ.14 ಮತ್ತು ನ.15ರಂದು ಎರಡು ದಿನ ಒಟ್ಟು ಎಂಟು ಮಂದಿಯ ವಿಚಾರಣೆಗೆ ದಿನ ನಿಗದಿ ಪಡಿಸಿ ನ್ಯಾಯಾಧೀಶ ಸಮೀವುಲ್ಲಾ ಆದೇಶ ನೀಡಿದರು. ಈ ಸಂದರ್ಭದಲ್ಲಿ ಆರೋಪಿ ಪ್ರವೀಣ್ ಚೌಗಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.





