ಸಾಹಿತ್ಯದಿಂದ ಭಾಷಾ ಕಲಿಕೆಗೆ ಅವಕಾಶ: ಡಾ.ಗಿರೀಶ್ ಭಟ್

ಉಡುಪಿ, ಅ.18: ಸಾಹಿತ್ಯದ ಮೂಲಕ ಭಾಷೆಯನ್ನು ಕಲಿಸಲು ಅವಕಾಶ ಮಾಡಿಕೊಡಬೇಕು. ಸಾಹಿತ್ಯವು ಭಾಷೆಯ ಬೇರೆ ಬೇರೆ ಶೈಲಿಗಳನ್ನು ಕಲಿಸಲು ಹಾಗೂ ಬಳಸಲು ಹೇಳಿಕೊಡುತ್ತದೆ. ಸಾಹಿತ್ಯದಲ್ಲಿ ಭಾಷೆಯ ಬಗೆ ಬಗೆಯ ಊರ್ಜಿಕರಣಗೊಳ್ಳುವ ಬೇರೆ ಬೇರೆ ರೂಪಗಳು ಸಿಗುತ್ತವೆ ಎಂದು ಕುವೆಂಪು ಭಾಷಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಗಿರೀಶ್ ಭಟ್ ಹೇಳಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಯೋಗದಲ್ಲಿ ಎಂಜಿಎಂ ಕಾಲೇಜು ಆವರಣದಲ್ಲಿರುವ ಆರ್‌ಆರ್‌ಸಿಯ ಧ್ವನ್ಯಲೋಕದಲ್ಲಿ ಶನಿವಾರ ನಡೆದ ಕೇಶವ ಪ್ರಶಸ್ತಿ -2025 ಪ್ರದಾನ ಸಮಾರಂಭದಲ್ಲಿ ಹಳಗನ್ನಡ ಓದು: ಏಕೆ? ಹೇಗೆ? ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಸಾಹಿತ್ಯವನ್ನು ಅಧ್ಯಯನ ಹಾಗೂ ಬೋಧಿಸುವ ಮೂಲಕ ನಮ್ಮಲ್ಲಿ ಭಾಷಾ ಕೌಶಲ ಸಿದ್ಧಿಸುತ್ತದೆ. ಪರಿಣಾಮ ಕಾರಿಯಾದ ಭಾಷೆಯನ್ನು ಸಿದ್ಧಿಸಿಕೊಳ್ಳಲು ಕೂಡ ಅದು ಸಹಾಯ ಮಾಡುತ್ತದೆ ಎಂದ ಅವರು, ಸಾಹಿತ್ಯ, ಹಳಗನ್ನಡದಿಂದ ಪರಿಣಾಮಕಾರಿ ಭಾಷಾ ಕೌಶಲ ಸಿದ್ಧಿ ಸಾಧ್ಯವಿದ್ದು ಜ್ಞಾನಕ್ಕಿದ್ದ ಸ್ಥಾನಮಾನವು ಇಂದು ದೇಹ ಶ್ರಮ ಮತ್ತು ಬೌದ್ಧಿಕ ನೆಲೆಯಲ್ಲಿ ಕಡಿಮೆಯಾಗಿದೆ ಎಂದರು.
ಕಳೆದ ಸಾವಿರ ವರ್ಷಗಳಲ್ಲಿ ದ್ರಾವಿಡ ಭಾಷೆಗಳು ಕವಲೊಡೆದಿಲ್ಲ. ಸಂಶೋಧನೆ, ಅಧ್ಯಯನ, ವಿಮರ್ಶೆ ನಿಟ್ಟಿನಲ್ಲಿ ಅಗತ್ಯವಾದ ಹಳಗನ್ನಡ ಪದವಿ, ಸ್ನಾತಕೋತ್ತರ ಪಠ್ಯದಲ್ಲಿ ವಿರಳವಾಗಿದೆ. ಸಂಸ್ಕೃತದಂತೆ ಹಳಗನ್ನಡ ಕಲಿಸದೇ ಇದ್ದರೆ ಮುಂದಿನ ಪೀಳಿಗೆಗೆ ತಿಳಿವ ಹಂಬಲ ಕಡಿಮೆಯಾಗಲಿದೆ. ಹಳಗನ್ನಡ ಕಲಿಕೆಯ ಭಾಷಾ ಸಲಕರಣೆ ಒದಗಿಸಬೇಕು. ಸಾಹಿತ್ಯವನ್ನು ಭಾಷಾ ಶೈಲಿಯ ಕಲಿಕೆಗೂ ಬಳಸಬೇಕು ಎಂದು ಅವರು ತಿಳಿಸಿದರು.
ಕೇಶವ ಪ್ರಶಸ್ತಿ 2025 ಸ್ವೀಕರಿಸಿದ ಸಾಹಿತಿ, ಕಲಾವಿದ ಡಾ.ರಮಾನಂದ ಬನಾರಿ ಮಾತನಾಡಿ, ಮೌಲ್ಯಗಳ ಸ್ಮರಣೆ, ವಿಸ್ತರಣೆ ಅತಿ ಮುಖ್ಯ. ಹೆತ್ತವರೆಲ್ಲ ತಾಯಂದಿರಲ್ಲ, ತಾಯ್ತನದ ಹೃದಯ ಉಳ್ಳವರು ನೈಜ ತಾಯಂದಿರು. ಸವಾಲುಗಳನ್ನು ಎದುರಿಸುವಲ್ಲಿ ಸಾಹಸ ಸಾಮರ್ಥ್ಯವಿದ್ದರೆ ಸಾಧನೆ ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಣಿಪಾಲ ಮಾಹೆ ಕುಲಸಚಿವ ಡಾ.ಪಿ.ಗಿರಿಧರ್ ಕಿಣಿ ಮಾತನಾಡಿದರು. ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಆರ್‌ಆರ್‌ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್‌ಆರ್ ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಮಾತುಗಳನ್ನಾಡಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಡಾ.ತಾಳ್ತಜೆ ವಸಂತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







