ಕಾರ್ಕಳ: ಮನೆ ಮೇಲೆ ಮರಬಿದ್ದು ಹಾನಿ

ಫೈಲ್ ಫೋಟೊ
ಉಡುಪಿ, ಅ.21: ಅರಬಿಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಕಳೆದ ಕೆಲವು ದಿನಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಕಂಡುಬಂದಿರುವ ಸತತ ಮಳೆ ಇಂದು ಸಂಜೆಯೂ ಉಡುಪಿ ಜಿಲ್ಲೆಯಾದ್ಯಂತ ಸುರಿದಿದೆ. ಮೂರು ದಿನಗಳಿಂದ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆ ಸುರಿಯುತ್ತಿದೆ.
ಸೋಮವಾರ ಸಂಜೆಯ ಬಳಿಕ ಉಡುಪಿ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಸಿಡಿಲು-ಮಿಂಚುಗಳ ಪ್ರತಾಪ ಕಂಡುಬಂದಿದ್ದು, ಜೊತೆಗೆ ಮಳೆಯೂ ಜೋರಾಗಿ ಸುರಿದಿದೆ. ಇದರಿಂದ ದೀಪಾವಳಿಯ ಪ್ರಯುಕ್ತ ಸಂಜೆ ನಡೆಯ ಬೇಕಿದ್ದ ಬಲೀಂದ್ರ ಪೂಜೆಗೆ ಅಡಚಣೆಯಾಗಿದೆ. ಗ್ರಾಮೀಣ ಭಾಗಗಳಲ್ಲಿ ಮಳೆಯ ನಡುವೆಯೇ ರೈತರು ಗದ್ದೆಗಳಲ್ಲಿ ಬಲೀಂದ್ರ ಪೂಜೆ ಮಾಡಿದರು.
ಗಾಳಿ-ಮಳೆಯಿಂದಾಗಿ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲೂಕು ಕುಕ್ಕುಂದೂರಿನಲ್ಲಿ ಶ್ರೀನಿವಾಸ ಉಡುಪ ಎಂಬವರ ಮನೆ ಮೇಲೆ ಭಾರೀ ಗಾತ್ರದ ಮರ ಬಿದ್ದು ಮನೆಗೆ ಸಂಪೂರ್ಣ ಹಾನಿಯಾಗಿದೆ. ಒಂದು ಲಕ್ಷ ರೂ.ಗಳಿಗೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ.
ಅದೇ ರೀತಿ ಬೆಳ್ಮಣ್ಣು ಗ್ರಾಮದ ಸುರೇಖಾ ಪೂಜಾರಿ ಎಂಬವರ ಮನೆಯ ಮೇಲೂ ಮರಬಿದ್ದು ಸಾವಿರಾರು ರೂ.ನಷ್ಟವಾಗಿರುವ ಮಾಹಿತಿ ಬಂದಿದೆ.
ಇಂದು ಬೆಳಗಿನ 8:30ರವರೆಗೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 17.6ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ 25.5ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಕುಂದಾಪುರದಲ್ಲಿ 20.4, ಕಾರ್ಕಳದಲ್ಲಿ 18.7, ಬ್ರಹ್ಮಾವರದಲ್ಲಿ 14.1, ಬೈಂದೂರಿನಲ್ಲಿ 14.0, ಉಡುಪಿಯಲ್ಲಿ 12.5 ಹಾಗೂ ಕಾಪುವಿನಲ್ಲಿ 7.9ಮಿ.ಮೀ. ಮಳೆಯಾದ ವರದಿ ಬಂದಿದೆ.







