ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ: ಸಹಾಯಧನ ಸೌಲಭ್ಯ

ಉಡುಪಿ, ಅ.21: ಕೇಂದ್ರ ಸರಕಾರದಿಂದ ಗರ್ಭಿಣಿ / ಬಾಣಂತಿ ಮಹಿಳೆ ಯರಿಗಾಗಿ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ/ ಬಾಣಂತಿ ಮಹಿಳೆಯರಿಗೆ 5000ರೂ.ಗಳ ಸಹಾಯಧನ ಲಭ್ಯವಿದೆ.
ಮೊದಲ ಪ್ರಸವದ ಗರ್ಭಿಣಿಯರು ಎಲ್.ಎಂ.ಪಿ ದಿನಾಂಕದಿಂದ 150 ದಿನಗಳ ಒಳಗೆ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮೊದಲನೇ ಕಂತಿನ ಅರ್ಜಿಯನ್ನು ನೋಂದಾಯಿಸಬೇಕು ಹಾಗೂ ಎರಡನೇ ಕಂತಿನಲ್ಲಿ ಮಗುವಿನ ಜನನದ ನೋಂದಣಿ ಮತ್ತು 3ನೇ ಚುಚ್ಚುಮದ್ದು ಪೂರ್ಣಗೊಂಡ ಬಳಿಕ ಅರ್ಜಿಯನ್ನು ನೋಂದಾಯಿಸಬಹುದಾಗಿದೆ.
ಮೊದಲನೆ ಕಂತಿನಲ್ಲಿ ರೂ.3000 ಹಾಗೂ ಎರಡನೇ ಕಂತಿನಲ್ಲಿ ರೂ. 2000ವನ್ನು (ಮಗುವಿನ ಜನನದ ನಂತರ 3ನೇ ಚುಚ್ಚುಮದ್ದು ಪೂರ್ಣ ಗೊಂಡ ನಂತರ) ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾಯಿ ಸಲಾಗುವುದು.
2ನೇ ಪ್ರಸವದ ಬಾಣಂತಿ ಮಹಿಳೆಯರಿಗೆ ಹೆಣ್ಣು ಮಗು ಜನಿಸಿದಲ್ಲಿ ರೂ. 6000 ಸಹಾಯಧನ ದೊರೆಯಲಿದ್ದು, ಜನನದ ನಂತರ ಒಂದನೇ ಕಂತಿನಲ್ಲಿ ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ಫಲಾನುಭವಿಯ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ವರ್ಗಾಸಲಾಗುವುದು (ಮಗು ಜನಿಸಿದ 270 ದಿನಗಳೊಳಗೆ ನೋಂದಾವಣೆಯಾಗಬೇಕು).
ನೋಂದಣಿಗೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್ ಪ್ರತಿ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ಪಡಿತರ ಚೀಟಿ/ ಜಾತಿ ಮತ್ತು ಆದಾಯ ಪ್ರಮಾಣ ಪತ್ರ / ನರೇಗಾ ಕಾರ್ಡ್/ ಇ-ಶ್ರಮ್ ಕಾರ್ಡ್/ಆಯುಷ್ಮಾನ್ ಕಾರ್ಡ್ (ಯಾವುದಾದರೂ ಒಂದು ನಕಲು ಪ್ರತಿ, ಪೋಷಣಾ ಟ್ರ್ಯಾಕರ್‌ನಲ್ಲಿ ಫೇಸ್ ಅಥೆಂಟಿಕೇಷನ್, ಫಲಾನುಭವಿಯ ಬ್ಯಾಂಕ್ ಖಾತೆ (ಎನ್‌ಪಿಸಿಐ ಮ್ಯಾಪಿಂಗ್ ಕಡ್ಡಾಯ) ಪ್ರತಿ ಕಡ್ಡಾಯವಾಗಿದೆ.
ಹೆಚ್ಚಿನ ವಿವರಗಳಿಗೆ ಸಮೀಪದ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ, ಮಹಿಳಾ ಮೇಲ್ವಿಚಾರಕಿ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







