ಕೋಣಿ, ಬಸ್ರೂರಿನಲ್ಲಿ ಕ್ಯಾನ್ಸರ್ ಜಾಗೃತಿ, ತಪಾಸಣಾ ಶಿಬಿರ

ಕುಂದಾಪುರ: ಸ್ತನ, ಗರ್ಭಕೋಶ ಹಾಗೂ ಬಾಯಿ ಕ್ಯಾನ್ಸರ್‌ಗಳ ಜೊತೆಗೆ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಯ ಉಚಿತ ಶಿಬಿರವನ್ನು ಆಯುಷ್ಮಾನ್ ಆರೋಗ್ಯ ಮಂದಿರ ಕೋಣಿ, ಬಸ್ರೂರು ಇಲ್ಲಿ ಆಯೋಜಿಸಲಾಗಿತ್ತು.
ಈ ಶಿಬಿರವನ್ನು ಮಾನಸ್ವಿನಿ ಸಂಜೀವಿನಿ ಗ್ರಾಮ ಪಂಚಾಯತ್ ಸೊಸೈಟಿ ಕೋಣಿ, ಗ್ರಾಮ ಪಂಚಾಯತ್ ಕೋಣಿ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ, ರೋಟರಿ ಕ್ಲಬ್ ಕೋಟೇಶ್ವರ, ಆನ್ಸ್ ಕ್ಲಬ್ ಕೋಟೇಶ್ವರ, ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.
ಕೋಣಿ ಮಾನಸ್ವಿನಿ ಗ್ರಾಮ ಪಂಚಾಯತ್ ಸೊಸೈಟಿ ಅಧ್ಯಕ್ಷೆ ನಾಗರತ್ನ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಕೋಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣಪತಿ ಶೇಟ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾದ್ಯಾಪಕಿ ಡಾ.ಅಖಿಲಾ ಡಿ. ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಕುರಿತು ಜನಜಾಗೃತಿ ಮೂಡಿಸಿದರು.
ಉಪನ್ಯಾಸದ ವೇಳೆ ಅವರು ಕ್ಯಾನ್ಸರ್ ಉಂಟಾಗುವ ವಿಧಾನ, ಅದರ ಲಕ್ಷಣಗಳು ಹಾಗೂ ಶೀಘ್ರ ಪತ್ತೆಯ ಅಗತ್ಯತೆಯನ್ನು ವಿವರಿಸಿದರು. ಸ್ತನ ಸ್ವಪರೀಕ್ಷೆ, ಪ್ಯಾಪ್ ಸ್ಮಿಯರ್ ಪರೀಕ್ಷೆ, ನಿಯಮಿತ ವೈದ್ಯಕೀಯ ತಪಾಸಣೆಯ ಮಹತ್ವವನ್ನು ತಿಳಿಸಿದರು. ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಅವರು ಜನರಿಗೆ ಹಿತವಚನ ನೀಡಿದರು.
ವೇದಿಕೆಯಲ್ಲಿ ಕೋಣಿ ಗ್ರಾಪಂ ಉಪಾಧ್ಯಕ್ಷೆ ಸೌಮ್ಯ, ಪಿಡಿಒ ತೇಜಪ್ಪ ಕುಲಾಲ್, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರಿನ ಪ್ರಾದೇಶಿಕ ವ್ಯವಸ್ಥಾಪಕ ರಂಜನ್, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶೀನ ಪೂಜಾರಿ, ರೋಟರಿ ಕ್ಲಬ್ ಕೋಟೇಶ್ವರ ಅಧ್ಯಕ್ಷ ವಿಜಯ ಶೆಟ್ಟಿ, ಕಾರ್ಯದರ್ಶಿ ಸುಧೀರ ಕುಮಾರ ಶೆಟ್ಟಿ, ಆನ್ಸ್ ಕ್ಲಬ್ ಕೋಟೇಶ್ವರ ಅಧ್ಯಕ್ಷೆ ರೇವತಿ ಪ್ರಭಾಕರ್, ಕಾರ್ಯದರ್ಶಿ ದೀಪಿಕಾ ಉದಯಕುಮಾರ್ ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾ, ಕೋಣಿಯ ಸಾಮಾಜಿಕ ಕಾರ್ಯಕರ್ತ ಕೃಷ್ಣದೇವ ಕಾರಂತ್, ಕೋಣಿ ಗ್ರಾಪಂ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 77 ಭಾಗವಹಿಸಿದ್ದರು.







