ಉಡುಪಿ ಜಿಲ್ಲಾ ಆಸ್ಪತ್ರೆಗೆ ಅಲ್ಟ್ರಾಸೌಂಡ್ ಯಂತ್ರ ಹಸ್ತಾಂತರ

ಉಡುಪಿ, ಅ.25: ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಂತೆಕಟ್ಟೆ ಗೋಪಾಲಪುರದ ವಿಭಾ ದೇವದಾಸ್ ಮೆಮೋರಿಯಲ್ ಟ್ರಸ್ಟ್ ದಾನವಾಗಿ ನೀಡಿದ ಅಲ್ಟ್ರಾಸೌಂಡ್ ಯಂತ್ರದ ಹಸ್ತಾಂತರ ಕಾರ್ಯಕ್ರಮ ಇಂದು ಉಡುಪಿಯ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಿತು.
ಸರಕಾರದ ಪರವಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ವಿಭಾ ದೇವದಾಸ್ ಮೆಮೋರಿಯಲ್ ಟ್ರಸ್ಟ್‌ನ ದೇವದಾಸ್ ಇವರಿಂದ 25 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಅಲ್ಟ್ರಾಸೌಂಡ್ ಯಂತ್ರವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಭಾ ಮೆಮೋರಿಯಲ್ ಟ್ರಸ್ಟ್ ಅಲ್ಟ್ರಾಸೌಂಡ್ ಯಂತ್ರವನ್ನು ದಾನವಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ನೀಡಿರುವರಿಂದ ಬಡಜನರು ದುಬಾರಿಯಾದ ಆಧುನಿಕ ಆರೋಗ್ಯ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಲು ಸಾಧ್ಯವಾಗಲಿದೆ ಎಂದರು.
ಸರಕಾರ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಅನೇಕ ಜನಪರ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇವು ಸಮರ್ಪಕವಾಗಿ ಅನುಷ್ಠಾನಗೊಂಡರೆ ಬಡಜನರು ಉತ್ತಮ ಆರೋಗ್ಯ ಚಿಕಿತ್ಸೆಯನ್ನು ಉಚಿತವಾಗಿ ಪಡೆಯ ಬಹುದಾಗಿದೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಗಳು ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡಿ ಸಹಕರಿಸಬೇಕು ಎಂದರು.
ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ವಿಭಾ ಮೆಮೋರಿಯಲ್ ಟ್ರಸ್ಟ್ ಜಿಲ್ಲಾ ಆಸ್ಪತ್ರೆಗೆ ಅಲ್ಟ್ರಾ ಸೌಂಡ್ ಯಂತ್ರವನ್ನು ಸಾರ್ವಜನಿಕ ಆಸ್ಪತ್ರೆಗೆ ನೀಡಿರುವುದು ಒಳ್ಳೆಯ ಸೇವಾ ಮನೋಭಾವದ ಕಾರ್ಯವಾಗಿದೆ. ಇದರಿಂದ ಜಿಲ್ಲೆಯ ಹಾಗೂ ರಾಜ್ಯ ವಿವಿಧ ಕಡೆಗಳಿಂದ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ದೇವದಾಸ್ ತಮ್ಮ ಮಗಳಾದ ವಿಭಾ ಅವರ ಸವಿನೆನಪಿಗಾಗಿ ಹಾಗೂ ಬಡಜನರ ಸೇವೆಗೆ ಅನುಕೂಲ ವಾಗಬೇಕೆಂಬ ಉದ್ದೇಶದಿಂದ ಅಲ್ಟ್ರಾ ಸ್ಕ್ಯಾನಿಂಗ್ ಯಂತ್ರವನ್ನು ದಾನವಾಗಿ ಜಿಲ್ಲಾ ಆಸ್ಪತ್ರೆಗೆ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಜನರ ಚಿಕಿತ್ಸೆಗೆ ಸಮರ್ಪಕವಾಗಿ ಬಳಕೆಯಾಗಬೇಕು ಎಂದ ದೇವದಾಸ್, ಸರಕಾರದ ಕೆಲಸ ಕಾರ್ಯಗಳಿಗೆ ಜನಸಾಮಾನ್ಯರ ಸಹ ಭಾಗಿತ್ವದಿಂದ ಉತ್ತಮ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಶೋಕ್ ಕೊಡವೂರು, ಜಿಲ್ಲಾ ಸರ್ಜನ್ ಡಾ.ಅಶೋಕ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮ್‌ರಾವ್, ಮಾನಸಿಕ ತಜ್ಞ ಡಾ.ವಾಸುದೇವ್, ನಿವಾಸಿ ವೈದ್ಯಾಧಿಕಾರಿ ಡಾ.ಆಮ್ನ ಹೆಗ್ಡೆ, ಶಂಕರ ಸಾಲಿಯಾನ್, ದೇವದಾಸ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.







