ಸುತ್ತೂರು ಶ್ರೀಗಳಿಂದ ಪುತ್ತಿಗೆ ನೃಸಿಂಹ ಸಭಾಭವನ ಉದ್ಘಾಟನೆ

ಉಡುಪಿ, ಅ.25: ಮೈಸೂರಿನ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಉಡುಪಿ ಶ್ರೀಕೃಷ್ಣ ಮಠದ ಬಳಿಯ ಗೀತಾ ಮಂದಿರದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಪುತ್ತಿಗೆ ನೃಸಿಂಹ ಸಭಾಭವನವನವನ್ನು ಶುಕ್ರವಾರ ಸಂಜೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿ ಮಾತನಾಡಿದ ಸುತ್ತೂರು ಶ್ರೀಗಳು, ಎಲ್ಲರೊಳಗೂ ದೇವರಿರುತ್ತಾನೆ. ಮೊದಲು ನಮ್ಮೊಳಗಿನ ದ್ವಂದ್ವ ವನ್ನು ದೂರಮಾಡಿಕೊಂಡು ಸದ್ಭಾವನೆ ಬೆಳೆಸಿಕೊಂಡಾಗ,ಸಂಕುಚಿತ ಭಾವನೆ ಬಿಟ್ಟು ವಿಶಾಲಭಾವವನ್ನು ಬೆಳೆಸಿಕೊಂಡಾಗ ಎಲ್ಲವೂ ಸಾಧ್ಯವಾಗುತ್ತದೆ ಎಂದರು.
ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ, ಜಗತ್ತಿನಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದ ಮೂಲಕ ಶಾಂತಿ ನೆಲೆಗೊಳ್ಳಬೇಕಾಗಿದೆ. ಇದಕ್ಕಾಗಿ ಭಗವದ್ಗೀತೆಯನ್ನು ಪ್ರಧಾನ ವಾಗಿಟ್ಟುಕೊಂಡು ವಿಶ್ವ ಕಟ್ಟುವ ಕಾರ್ಯ ನಡೆಯಬೇಕು ಎಂದರು.
ಒಡಿಸ್ಸಾ ಹೈಕೋರ್ಟ್‌ನ ನ್ಯಾಯಾಧೀಶ ಜಸ್ಟೀಸ್ ಕೃಷ್ಣ ದೀಕ್ಷಿತ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಮೌಲ್ಯದಿಂದ ಸಂವಿಧಾನ ಜೀವಂತವಾಗಿ ಉಳಿದಿದೆ. ಮೌಲ್ಯಾಧಾರಿತ ಸಂವಿಧಾನ ಸದಾ ಕಾಲ ಉಳಿಯುತ್ತದೆ. ವಿಶ್ವದ ಅನೇಕ ಸಂವಿಧಾನಗಳು ನಶಿಸಿಹೋಗಿವೆ. ಆದರೆ ಭಾರತದ ಸಂವಿಧಾನ ಇಂದಿಗೂ ಭದ್ರವಾಗಿದೆ ಎಂದರು.
ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಸುತ್ತೂರುಶ್ರೀಗಳಿಗೆ ಪುತ್ತಿಗೆ ಮಠದ ವತಿಯಿಂದ ಗೌರವ ಸಲ್ಲಿಸಲಾಯಿತು. ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಶ್ರೀಕೃಷ್ಣಾನುಗೃಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿತೋಷ್ ಆಚಾರ್ಯ ಸ್ವಾಗತಿಸಿ, ಡಾ.ಬಿ. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸ್ವಾಗತ: ಸಮಾರಂಭಕ್ಕೆ ಆಗಮಿಸಿದ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾ ಯಿತು. ನಂತರ ಸ್ವಾಮೀಜಿಯವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ದರ್ಶನ ಪಡೆದರು.







