ಮಹಿಳೆಯರಿಗೆ ಮುಟ್ಟಿನ ರಜೆ| ಸಿಐಟಿಯು ಹೋರಾಟಕ್ಕೆ ಸಂದ ಜಯ: ಮಹಾಂತೇಶ

ಕುಂದಾಪುರ, ಅ.26: ರಾಜ್ಯ ಸರಕಾರ ಇತ್ತೀಚೆಗೆ ಘೋಷಿಸಿದ ಮಹಿಳೆಯರಿಗೆ ತಿಂಗಳಿಗೊಂದು ಮುಟ್ಟಿನ ರಜೆ ಸಿಐಟಿಯುನ ದೀರ್ಘಕಾಲಿಕ ಬೇಡಿಕೆಯಾಗಿದ್ದು ಇದೀಗ ಬೇಡಿಕೆ ಈಡೇರಿದೆ. ಇದು ಸಿಐಟಿಯು ಹೋರಾಟಕ್ಕೆ ಸಂದ ಜಯ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಹೇಳಿದ್ದಾರೆ.
ಕುಂದಾಪುರದ ಹೆಂಚು ಕಾರ್ಮಿಕ ಭವನದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಹಂಚು ಕಾರ್ಮಿಕ ಸಂಘದ 25ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಕನಿಷ್ಠ ಕೂಲಿ 35 ಸಾವಿರ ರೂ.ಗೆ ಏರಿಸಬೇಕು. ಕೆಲಸದ ಅವಧಿ 8 ಗಂಟೆಯಲ್ಲೇ ಮುಂದುವರಿಸಬೇಕು ಮತ್ತು ಕೆಲಸದ ಸ್ಥಳದಲ್ಲಿ ಸುರಕ್ಷತೆಗಾಗಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಉತ್ಪಾದನೆ ಯಲ್ಲಿ ಕಾರ್ಮಿಕರ ಪಾಲು ಕುಸಿಯುತ್ತಿದ್ದು, ಮಾಲಕರ ಪಾಲು ಹೆಚ್ಚುತ್ತಿದೆ. ಧರ್ಮಸ್ಥಳದಲ್ಲಿ ನಡೆದಿರುವ ಹತ್ಯೆಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಮಹಾಸಭೆಯಲ್ಲಿ ಅವೆ ಮಣ್ಣಿನ ಸಮಸ್ಯೆ ಬಗ್ಗೆ, ಇಎಸ್‌ಐ ಆಸ್ಪತ್ರೆ ಖಾಯಂ ವೈದ್ಯರೊಂದಿಗೆ ಸುವ್ಯವಸ್ಥೆಗೊಳಿಸು ವಂತೆ, ಪಿ.ಎಫ್.ಗೆ ಆದಾಯ ಮಿತಿ ವಿಸ್ತರಿಸುವಂತೆ, ರಾಜ್ಯ ಸರಕಾರ ಪ್ರಕಟಿಸಿದ ಕರಡು ಕನಿಷ್ಠ ಕೂಲಿ ಆದೇಶ ಹೊರಡಿಸಬೇಕೆಂಬ ಹೋರಾಟಕ್ಕೆ ನಿರ್ಣಯ ಕೈಗೊಳ್ಳಲಾಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿ.ನರಸಿಂಹ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ವಾರ್ಷಿಕ ಚಟುವಟಿಕೆ ವರದಿ, ಲೆಕ್ಕಪತ್ರ ಮಂಡಿಸಿದರು. ವರದಿಯ ಮೇಲೆ ಹಲವು ಕಾರ್ಯಕರ್ತರು ಚರ್ಚೆ ನಡೆಸಿ ಕರಡು ವರದಿ ಅಂಗೀಕರಿಸಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ವಿ.ನರಸಿಂಹ, ಕಾರ್ಯದರ್ಶಿ ಎಚ್. ನರಸಿಂಹ, ಕೋಶಾಧಿಕಾರಿ ಪ್ರಕಾಶ್ ಕೋಣಿ ಆಯ್ಕೆಯಾದರು. 9 ಜನ ಪದಾಧಿಕಾರಿಗಳು ಸೇರಿದಂತೆ ಕಾರ್ಯಕಾರಿ ಸಮಿತಿ ಚುನಾಯಿಸಲಾಯಿತು. ವೇದಿಕೆಯಲ್ಲಿ ಮುಖಂಡರಾದ ಚಂದ್ರಶೇಖರ್ ವಿ., ಸುರೇಶ್ ಕಲ್ಲಾಗರ, ಕೆ.ಶಂಕರ್, ಮಹಾಬಲ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು.







