ಪೋಷಕರ ತ್ಯಾಗ ಮಕ್ಕಳ ಭವಿಷ್ಯಕ್ಕೆ ಬುನಾದಿ: ಅಶೋಕ್ ಶೆಟ್ಟಿ

ಕಲ್ಯಾಣಪುರ, ಅ.27: ಕಲಿಕೆಯ ಸಮಯದಲ್ಲಿ ಪೋಷಕರು ಸ್ವಲ್ಪ ಬಿಡುವು ಮಾಡಿಕೊಂಡು ವಿದ್ಯಾರ್ಥಿಗಳ ಜೊತೆ ಕೂತರೆ ಮಕ್ಕಳ ಕಲಿಕೆಗೆ ಸ್ಪೂರ್ತಿ ತುಂಬಿದ ಹಾಗೆ. ಮೊಬೈಲ್, ಟಿವಿ ಧಾರವಾಹಿಗಳನ್ನು ತ್ಯಾಗ ಮಾಡಿ, ವಿದ್ಯಾರ್ಥಿ ಗಳಿಗೆ ಸಮಯ ನೀಡುವುದು ಮುಖ್ಯವಾಗಿದೆ. ನಿಮ್ಮ ಇಂದಿನ ತ್ಯಾಗ ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ವಾಗ್ಮಿ ಆಶೋಕ್‌ಕುಮಾರ್ ಶೆಟ್ಟಿ ಹೇಳಿದ್ದಾರೆ.
ಕಲ್ಯಾಣಪುರ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆಯಲ್ಲಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆಗೆ ತಯಾರಿ ಬಗ್ಗೆ ಅವರು ಮಾತನಾಡಿದರು.
ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಮಾತ್ರ ಕಾರಣರಲ್ಲ ಪೋಷಕರು ಕೂಡ ಅಷ್ಟೇ ಪ್ರಮುಖರು ಎಂದು ಅಶೋಕ್‌ಕುಮಾರ್ ಶೆಟ್ಟಿ ತಿಳಿ ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಅನ್ಸಿಲ್ಲ ಡಿಮೆಲ್ಲೊ ಮಾತನಾಡಿ ಪ್ರತಿ ಪರೀಕ್ಷೆಗೂ ನೀವು ನೈತಿಕ ಬೆಂಬಲ ನಿಮ್ಮ ಮಕ್ಕಳಿಗೆ ನೀಡುತ್ತಾ ಬಂದಿದ್ದೀರಿ. ಇದು ಈ ಮಕ್ಕಳ ಜೀವನದ ಮೊದಲ ಪಬ್ಲೀಕ್ ಪರೀಕ್ಷೆಯಾಗಿದೆ. ಆದ್ದರಿಂದ ನಿಮ್ಮ ಬೆಂಬಲ ಹಾಗೂ ಪ್ರೋತ್ಸಾಹ ವಿದ್ಯಾರ್ಥಿಗೆ ಇನ್ನೂ ಹೆಚ್ಚಿನ ತಯಾರಿ ನಡೆಸಲು ಸಹಕಾರಿಯಾಗಲಿದೆ ಎಂದರು.
ಶಿಕ್ಷಕಿ ಸಬೀತಾ ಸ್ವಾಗತಿಸಿದರು. ಹಿರಿಯ ಶಿಕ್ಷಕ ಆಲ್ವಿನ್ ದಾಂತಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನ್ಯಾನ್ಸಿ ಡಿಸೋಜ ವಂದಿಸಿದರು.







