ಉಡುಪಿ ಜಿಲ್ಲೆಯಾದ್ಯಂತ ಸಾಧಾರಣ ಮಳೆ

ಉಡುಪಿ, ಅ.27: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತ ‘ಮೊಂಥಾ’ ಚಂಡಮಾರುತ, ಮಂಗಳವಾರ ಬೆಳಗ್ಗೆ ಇನ್ನಷ್ಟು ಪ್ರಬಲಗೊಂಡು ಸಂಜೆಯ ವೇಳೆ ಆಂಧ್ರ ಪ್ರದೇಶದ ಕಾಕಿನಾಡದ ಮಚಲಿಪಟ್ಟಣ ಹಾಗೂ ಕಾಳಿಂಗಪಟ್ಟಣದ ನಡುವೆ ಹಾದುಹೋಗುವ ಸಾಧ್ಯತೆ ಇದ್ದು, ಇದರಿಂದ ಅರಬಿಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಾಳೆಯೂ ರಾಜ್ಯ ಕರಾವಳಿಯಲ್ಲಿ ಮಳೆಯಾಗುವ ಸಾದ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ತಿರುವನಂತಪುರದ ಹವಾಮಾನ ಕೇಂದ್ರಗಳು ತಿಳಿಸಿವೆ.
ಸೋಮವಾರ ಅಪರಾಹ್ನದ ವೇಳೆಗೆ ಇದು ಮಂಗಳೂರಿನಿಂದ ಪಶ್ಚಿಮ- ವಾಯುವ್ಯ ದಿಕ್ಕಿನಲ್ಲಿ 940ಕಿ.ಮೀ. ದೂರದಲ್ಲಿದ್ದು, ಮುಂಬಯಿಯಿಂದ ಪಶ್ಚಿಮ- ಆಗ್ನೇಯ ದಿಕ್ಕಿನಲ್ಲಿ 700ಕಿ.ಮೀ. ಹಾಗೂ ಪಣಜಿಇಯಂದ 750ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ. ಮುಂದಿನ 48 ಗಂಟೆಗಳಲ್ಲಿ ಇಂದು ಉತ್ತರ- ಈಶಾನ್ಯ ಭಾಗದತ್ತ ಚಲಿಸುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಇದರಿಂದ ಸಮುದ್ರದ ಗಂಟೆಗೆ 40ರಿಂದ 50ಕಿ.ಮೀ. ವೇಗದ ಗಾಳಿ ಬೀಸಲಿದ್ದು, ಅರಬಿಸಮುದ್ರ ಪ್ರಕ್ಷುಬ್ಧವಾಗಿರುವು ದರೊಂದಿಗೆ ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇರುತ್ತದೆ.
ಕೇರಳ ಹಾಗೂ ಕರ್ನಾಟಕದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ ಹಾಗೂ ಮಲ್ಪೆ ಬಂದರುಗಳಲ್ಲಿ ಎಚ್ಚರಿಕೆ ಸೂಚನೆಯಾಗಿ ನಂ.3 ಸಿಗ್ನಲ್ ಪ್ರದರ್ಶಿಸಲು ತಿಳಿಸಲಾಗಿದೆ.
ಸಾಧಾರಣ ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 22.8ಮಿ.ಮೀ. ಮಳೆಯಾಗಿದೆ. ಕಾಪುವಿನಲ್ಲಿ ಅತ್ಯಧಿಕ 46ಮಿ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ 31ಮಿ.ಮೀ., ಉಡುಪಿಯಲ್ಲಿ 29.7, ಕುಂದಾಪುರದಲ್ಲಿ 22.8, ಬೈಂದೂರಿನಲ್ಲಿ 21.6, ಹೆಬ್ರಿಯಲ್ಲಿ 15.1 ಹಾಗೂ ಕಾರ್ಕಳದಲ್ಲಿ 14.3ಮಿ.ಮೀ. ಮಳೆಯಾದ ವರದಿ ಬಂದಿದೆ.
ಇಂದು ಸಹ ದಿನವಿಡೀ ಹನಿಮಳೆ ಬೀಳುತಿದ್ದು, ಜನ ಕೊಡೆಗಳಿಲ್ಲದೇ ನೆನೆದುಕೊಂಡೇ ಓಡಾಡುವುದು ಕಂಡು ಬಂತು. ಮಳೆಯಿಂದ ಕುಂದಾಪುರ ತಾಲೂಕಿನ ಹಕ್ಲಾಡಿಯ ಪ್ರಸಾದ ಎಂಬವರ ಮನೆಗೆ ಭಾಗಶ: ಹಾನಿಯಾಗಿದ್ದು, 40ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಕಾಪು ತಾಲೂಕು ತೆಂಕ ಗ್ರಾಮದ ಗಣೇಶ ದೇವಾಡಿಗರ ವಾಸದ ಮನೆ ಗಾಳಿ-ಮಳೆಯಿಂದ ಹಾನಿಗೊಂಡಿದ್ದು 50,000 ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.







