ಉಡುಪಿ ನಗರಸಭೆಯಿಂದಲೇ ಬಜೆ ಡ್ಯಾಂ ನೀರಿನ ನಿರ್ವಹಣೆ

ಉಡುಪಿ, ಅ.28: ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ಸುಝೆಝ್ ಪ್ರೋಜೆಕ್ಟ್‌ಗೆ ಬಜೆ ಡ್ಯಾಂನ ಜವಾಬ್ದಾರಿ ಹಸ್ತಾಂತರಿಸಿದ ಬಳಿಕ ನಗರದ ಕೆಲವು ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ತೊಡಕು ಉಂಟಾಗಿರುವ ಬಗ್ಗೆ ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಆರೋಪಗಳು ಕೇಳಿಬಂದವು. ಈ ಬಗ್ಗೆ ಚರ್ಚೆ ನಡೆದು ಈ ಜವಾಬ್ದಾರಿ ಮತ್ತೆ ನಗರಸಭೆಯೇ ವಹಿಸಿಕೊಳ್ಳಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿ ಸಿದ ಸದಸ್ಯೆ ಸುಮಿತ್ರಾ ಆರ್. ನಾಯಕ್, ಪರ್ಕಳ ವಾರ್ಡ್‌ನಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ದೀಪಾವಳಿ ಹಬ್ಬದ ಸಮಯದಲ್ಲಿಯೇ ನೀರು ಬಾರದೆ ಜನ ತೊಂದರೆ ಅನುಭವಿಸಿದರು. ಈ ಮಳೆಗಾಲದಲ್ಲಿಯೇ ಟ್ಯಾಂಕರ್ ನೀರು ಪೂರೈಸುವ ಪರಿಸ್ಥಿತಿ ಉದ್ಭವ ವಾಗಿದೆ. ವಾರಾಹಿಯವರಿಗೆ ಹಸ್ತಾಂತರಿಸಿದ ಬಳಿಕ ಈ ಸಮಸ್ಯೆ ಉಂಟಾ ಗಿದೆ ಎಂದು ದೂರಿದರು.
ವಾರಾಹಿಯವರಿಗೆ ಜವಾಬ್ದಾರಿ ಹಸ್ತಾಂತರಿಸಿದ ಬಳಿಕ ನಗರಸಭೆ ಅಧಿ ಕಾರಿಗಳಿಗೆ ಜವಾಬ್ದಾರಿ ಇಲ್ಲದಂತೆ ವರ್ತಿಸುವುದು ಸರಿಯಲ್ಲ. ದೂರುಗಳು ಬಂದರೆ ಸಂಬಂಧಪಟ್ಟವರಿಗೆ ಹೇಳಿ ಸಮಸ್ಯೆ ಸರಿಪಡಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಇಂದು ನಗರಸಭೆಯ ಎಲ್ಲ 35ವಾರ್ಡ್‌ಗಳಲ್ಲಿಯೂ ನೀರಿನ ಸಮಸ್ಯೆ ಉಂಟಾಗಿದೆ. ವಾರಾಹಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಅವರಿಗೆ ಈ ಜವಾಬ್ದಾರಿ ನೀಡಿರುವುದು ಸರಿಯಲ್ಲ. ಬಜೆಯ ನೀರು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರಗೆ ಮತ್ತೆ ಹಿಂದಿನಂತೆ ನಗರಸಭೆಯೇ ಬಜೆ ನೀರು ಪೂರೈಕೆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು.
ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ಈ ಸಂಬಂಧ ಪ್ರೊಜೆಕ್ಟ್ ಹಾಗೂ ನಗರಸಭೆಯ ಅಧಿಕಾರಿ ಗಳನ್ನು ಒಟ್ಟು ಸೇರಿಸಿ ಸಮಸ್ಯೆ ಸರಿಪಡಿಸುವ ಕಾರ್ಯ ಮಾಡಬೇಕು ಎಂದರು. ಮೆಸ್ಕಾಂ ವಿದ್ಯುತ್ ಕಡಿತದಿಂದ ಈ ಸಮಸ್ಯೆ ಆಗಿದೆ ಎಂದು ಪ್ರೊಜೆಕ್ಟ್‌ನ ಇಂಜಿನಿಯರ್ ರಾಕೇಶ್ ಗೌಡ ತಿಳಿಸಿದರು. ಮಲ್ಪೆ ಕರಾವಳಿ ಭಾಗದ ಎಲ್ಲ ಐದು ವಾರ್ಡ್‌ಗಳಲ್ಲಿಯೂ ದೀಪಾವಳಿ ಸಮಯ ನೀರು ಬಾರದೆ ಜನ ನಮಗೆ ಬೈಯುತ್ತಿದ್ದಾರೆ ಎಂದು ಸುಂದರ್ ಕಲ್ಮಾಡಿ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಈ ಬಗ್ಗೆ ನಮಗೂ ಸಾಕಷ್ಟು ದೂರುಗಳು ಬರುತ್ತಿವೆ. ಈ ಪ್ರೊಜೆಕ್ಟ್‌ಗೆ ಜವಾಬ್ದಾರಿ ಹಸ್ತಾಂತರಿಸುವ ಮೊದಲು ಯಾವುದೇ ಸಮಸ್ಯೆ ಇರಲಿಲ್ಲ. ಈಗ ಎಲ್ಲ ಕಡೆ ನೀರಿನ ಸಮಸ್ಯೆ ಕೇಳಿಬರುತ್ತಿವೆ. ಆದುದರಿಂದ ಈ ಸಮಸ್ಯೆ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್ ಜೊತೆ ಚರ್ಚಿಸಲಾಗುವುದು. ನಗರಸಭೆಯಿಂದಲೇ ಬಜೆ ನೀರಿನ ನಿರ್ವಹಣೆ ಜವಾಬ್ದಾರಿ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆಗಳ ಹೊಂಡ ದುರಸ್ತಿ: ಉಡುಪಿ ನಗರದ ಎಲ್ಲ ರಸ್ತೆಗಳು ಹದಗೆಟ್ಟಿದ್ದು, ದುರಸ್ತಿ ಕಾರ್ಯ ನಡೆಸುವಂತೆ ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮಳೆಯಿಂದಾಗಿ ಹೊಂಡ ಮುಚ್ಚುವ ಕೆಲಸ ಆಗುತ್ತಿಲ್ಲ. ಈಗಾಗಲೇ ಹೊಂಡ ಮುಚ್ಚಲು ಅಂದಾಜು ಲೆಕ್ಕಚಾರ ಹಾಕಲಾಗಿದ್ದು, ಸುಮಾರು 2.5ಕೋಟಿ ರೂ. ಬೇಕಾಗುತ್ತದೆ ಎಂದರು.
ಪರ್ಯಾಯ ಪ್ರಯುಕ್ತ ನಗರದ ರಸ್ತೆಗಳನ್ನು ಪ್ರವಾಸೋದ್ಯಮದ ಇಲಾಖೆಯ ಅನುದಾನದಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದು, ಅಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.
ರಮೇಶ್ ಕಾಂಚನ್ ಮಾತನಾಡಿ, ಮಲ್ಪೆ ಬೀಚ್‌ನಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಸಂಜೆ 6ಗಂಟೆಗೆ ಬೀಗ ಜಡಿಯಲಾಗುತ್ತಿದೆ. ಇದರಿಂದ ಪ್ರವಾಸಿಗರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಮಣಿಪಾಲ ಟೈಗರ್ ಸರ್ಕಲ್ ಹಾಗೂ ಬಸ್ ನಿಲ್ದಾಣ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಿ ಕೂಡಲೇ ಕಾಮಗಾರಿ ಆರಂಭಿಸಬೇಕು. ಸಂಪೂರ್ಣ ಹದಗೆಟ್ಟ ನಿಲ್ದಾಣವನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಸದಸ್ಯ ಮಂಜು ನಾಥ್ ಮಣಿಪಾಲ ಆಗ್ರಹಿಸಿದರು. ಪಿಪಿಪಿ ಮಾದರಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ರಚಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.
ಬೀದಿನಾಯಿಗಳ ವಿರುದ್ಧ ಕ್ರಮ
ನಗರದಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು, ಈ ಬಗ್ಗೆ ಹಲವು ಸಭೆಗಳಲ್ಲಿ ಪ್ರಸ್ತಾಪ ಮಾಡಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸದಸ್ಯೆ ಅಮೃತಾ ಕೃಷ್ಣಮೂರ್ತಿ ಸಭೆಯಲ್ಲಿ ದೂರಿದರು.
ಇದಕ್ಕೆ ಉತ್ತರಿಸಿದ ಪರಿಸರ ಇಂಜಿನಿಯರ್ ರವಿಪ್ರಕಾಶ್, ಬೀದಿನಾಯಿ ಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಯಾರು ಟೆಂಡರ್‌ನಲ್ಲಿ ಭಾಗವಹಿಸುತ್ತಿಲ್ಲ. ಅಲ್ಲದೆ ಸಂತಾನ ಹರಣ ಮಾಡುವಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ನೆರೆಮನೆಯವರು ಆಕ್ಷೇಪ ಮಾಡುತ್ತಿದ್ದಾರೆ. ಪ್ರಾಣಿ ಕಲ್ಯಾಣ ಮಂಡಳಿಯ ನಿಯಮದಲ್ಲಿ ಮತ್ತಷ್ಟು ಬದಲಾವಣೆಯಾಗಿರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.







