ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಬಂಧು ಡೇ ಕೇರ್ ಕೇಂದ್ರ ಪ್ರಾರಂಭ

ಉಡುಪಿ, ಅ.28: ದೊಡ್ಡಣಗುಡ್ಡೆಯಲ್ಲಿರುವ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ‘ಮಾನಸಧಾರಾ ಯೋಜನೆ’ ಯಡಿಯಲ್ಲಿ ‘ಬಂಧು ಹಗಲು ಆರೈಕೆ ಕೇಂದ್ರ’ ಪುನರಾರಂಭಗೊಂಡಿದೆ ಎಂದು ಆಸ್ಪತ್ರೆಯ ನಿರ್ದೇಶಕ ಹಾಗೂ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಸಮಾಜದಲ್ಲಿ ಗೌರವಯುತ ಮತ್ತು ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ಮಹತ್ತರ ಉದ್ದೇಶದಿಂದ, ಕರ್ನಾಟಕ ಸರಕಾರದ ‘ಮಾನಸಧಾರಾ ಯೋಜನೆ’ಯ ಸಹಯೋಗದೊಂದಿಗೆ ‘ಬಂಧು ಹಗಲು ಆರೈಕೆ ಕೇಂದ್ರ’ವನ್ನು ಮರು ಆರಂಭಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನಸಿಕ ಆರೋಗ್ಯ ಸುಧಾರಣೆಯು ಕೇವಲ ಚಿಕಿತ್ಸೆಗೆ ಸೀಮಿತವಾಗಿಲ್ಲ, ಅದು ಕೌಶಲ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಬೆಂಬಲವನ್ನು ಒಳಗೊಂಡಿದೆ. ಈ ಕೇಂದ್ರವು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳಿಗೆ ಎರಡನೇ ಅವಕಾಶ ನೀಡುವ ವೇದಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರದ ಪ್ರಮುಖ ಅಂಶಗಳು:
ವೃತ್ತಿಪರ ತರಬೇತಿ: ಸ್ವಾವಲಂಬನೆಗೆ ಉತ್ತೇಜನ ನೀಡಲು ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ ಮತ್ತು ಕರಕುಶಲ ವಸ್ತುಗಳ ತಯಾರಿಕೆಯ ತರಬೇತಿಗಳನ್ನು ನೀಡಲಾಗುತ್ತದೆ.
ಆರೋಗ್ಯ ಮತ್ತು ಕೌಶಲ್ಯ ವೃದ್ಧಿ: ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ದೈಹಿಕ ವ್ಯಾಯಾಮ, ಯೋಗ ತರಬೇತಿ ಹಾಗೂ ಸಾಮಾಜಿಕ ಪುನರ್‌ಏಕೀಕರಣಕ್ಕಾಗಿ ಸಂವಹನ ಕೌಶಲ್ಯಗಳ ತರಬೇತಿ ಲಭ್ಯವಿದೆ.
ಪೌಷ್ಟಿಕ ಆಹಾರ: ಪ್ರತಿದಿನದ ಮಧ್ಯಾಹ್ನದ ಊಟವನ್ನು ಉಡುಪಿ ಶ್ರೀಕೃಷ್ಣ ಮಠದ ಸಹಯೋಗದೊಂದಿಗೆ ಒದಗಿಸಲಾಗುವುದು. ಜೊತೆಗೆ, ಬೆಳಿಗ್ಗೆ ಮತ್ತು ಸಂಜೆ ಕಾಫಿ-ತಿಂಡಿ ವ್ಯವಸ್ಥೆ ಇರುತ್ತದೆ.
ಪ್ರೋತ್ಸಾಹಕ ಭತ್ಯೆ: ತರಬೇತಿಯ ಮೊದಲ ಮೂರು ತಿಂಗಳ ಅವಧಿಗೆ ಪ್ರತಿದಿನ ರೂ.40 ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ.
ಕೇಂದ್ರದ ವಿವರ: ಸ್ಥಳ- ಡಾ. ಎ. ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆ ಹತ್ತಿರ, ದೊಡ್ಡಣಗುಡ್ಡೆ, ಉಡುಪಿ. ಸಮಯ: ಪ್ರತಿದಿನ ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ.
ಯಾವುದೇ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು (ಮನೋವೈದ್ಯರ ಶಿಫಾರಸು ಪತ್ರ ತರುವುದು ಉತ್ತಮ).
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:9538886291ನ್ನು ಸಂಪರ್ಕಿಸುವಂತೆ ಡಾ.ಪಿ.ವಿ.ಭಂಡಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.







