ಉಡುಪಿ: ವಸಂತ್ ಗಿಳಿಯಾರು ವಿರುದ್ಧ ಕ್ರಮಕ್ಕೆ ಯುವ ಕಾಂಗ್ರೆಸ್ ಮನವಿ

ಕುಂದಾಪುರ, ಅ.29: ಕಲ್ಲಡ್ಕ ಪ್ರಭಾಕರ್ ಭಟ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮೂಲಕ ಹಿಂದುತ್ವ ಸಂಘಟನೆಗಳ ಕಾರ್ಯ ಕರ್ತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟಿದ ವಸಂತ್ ಗಿಳಿಯಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಕುಂದಾಪುರ ಪೊಲೀಸರಿಗೆ ಮನವಿ ನೀಡಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಎಂಬ ಶಕ್ತಿಯನ್ನು ಕೆಣಕಿ ಉಳಿದ ಸರಕಾರವಿಲ್ಲ! ಭಟ್ಟರ ಬಂಧನಕ್ಕೆ ಒತ್ತಡವಿದೆ ಎಂಬ ಮಾತು ಕೇಳಿಸಿಕೊಂಡೆ. ಕರಾವಳಿ ಕಿಡಿ ಕಿಡಿಯಾದೀತು. ಪ್ರಭಾಕರ ಭಟ್ಟರ ಪ್ರಭಾವ ಏನೂ ಎನ್ನುವುದನ್ನ ಪ್ರದರ್ಶನ ಮಾಡುವ ರಿಸ್ಕಿಗೆ ಯಾರೂ ಕೈ ಹಾಕದೇ ಇರೋದು ಸೇಫ್ ! ಕರಾವಳಿ ಕರ್ನಾಟಕ ಶಾಂತಿಯಲ್ಲಿರಲಿ ಎನ್ನುವುದು ಸಲಹೆ’ ಎಂಬ ಬರಹವೊಂದನ್ನು ವಸಂತ್ ಗಿಳಿಯಾರ್ ತನ್ನ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿ ದ್ದರು. ಇದರಿಂದ ಕೋಮು ಪ್ರಚೋದನೆ ನಡೆಸಿ ಕರಾವಳಿಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ವಸಂತ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಕುಂದಾಪುರ ವಿಧಾನಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಮಂತ್ ಕುಂದಾಪುರ, ಕಾಳವಾರ ಗ್ರಾಪಂ ಸದಸ್ಯರು ಹಾಗೂ ಕೆ.ಡಿ.ಪಿ. ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಕಾಂಗ್ರೆಸ್ ಮುಖಂಡ ಸುನಿಲ್ ಪೂಜಾರಿ ಕೋಡಿ, ಕುಂದಾಪುರ ವಲಯ ಸಹಬಾಳ್ವೆ ಸಂಚಾಲಕ ರಾಮಕೃಷ್ಣ ಹೇರ್ಳೆ, ಕುಂದಾಪುರ ಪುರಸಭೆ ನಾಮ ನಿರ್ದೇಶಿತ ಸದಸ್ಯ ಅಶೋಕ್ ಸುವರ್ಣ, ಕುಂದಾಪುರ ಪುರಸಭೆ ಮಾಜಿ ಸದಸ್ಯ ಕೇಶವ ಭಟ್, ಕುಮಾರ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.







