ಕಡಿಮೆ ಗುಣಮಟ್ಟದ ಚಿನ್ನಾಭರಣ ಅಡವಿಟ್ಟು ವಂಚನೆ: ಪ್ರಕರಣ ದಾಖಲು

ಬ್ರಹ್ಮಾವರ, ಅ.29: ಕಡಿಮೆ ಗುಣಮಟ್ಟದ ಚಿನ್ನಾಭರಣ ಅಡವಿಟ್ಟು ಸಾಲ ಪಡೆದುಕೊಂಡು ಸಹಕಾರಿ ಸಂಘಕ್ಕೆ ಮೋಸ ಮಾಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಶಾಖೆಯಲ್ಲಿ ಯಶವಂತ ಕುಮಾರ್ ಎಂಬಾತ ಜು.24ರಂದು 69.400 ತೂಕದ ಚಿನ್ನಾಭರಣ ಅಡವಿಟ್ಟು, 4,60,000ರೂ. ಸಾಲ ಪಡೆದುಕೊಂಡಿದ್ದನು. ಕೆಲವೊಂದು ದಿನಗಳ ಬಳಿಕ ಈ ಚಿನ್ನಾಭರಣಗಳನ್ನು ಪರೀಕ್ಷಿಸಿದಾಗ ಅವು ಅಲ್ಪ ಗುಣಮಟ್ಟದೆಂದು ಅಪ್ರೈಸರ್ ತಿಳಿಸಿದ್ದು, ನಂತರ ಆರೋಪಿಯು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ ಎಂದು ದೂರಲಾಗಿದೆ.
ಆರೋಪಿಯು ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಸಂಘದಲ್ಲಿ ಅಡವು ಇಟ್ಟು ಸಾಲ ಪಡೆದು ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿದ್ದಾನೆ. ಆರೋಪಿಯೊಂದಿಗೆ ಉಮಾನಾಥ ಶೆಟ್ಟಿ ಎಂಬಾತನು ಶಾಮೀಲು ಇರುವ ಬಗ್ಗೆ ಸಂದೇಹ ಇದೆ ಎಂದು ಶಾಖಾ ವ್ಯವಸ್ಥಾಪಕಿ ಸುರೇಖಾ ಕುಮಾರಿ ದೂರಿನಲ್ಲಿ ತಿಳಿಸಿದ್ದಾರೆ.
Next Story





