ಯುವಕನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ: ಪ್ರಕರಣ ದಾಖಲು

ಬ್ರಹ್ಮಾವರ, ಅ.31: ಯುವಕನೊಬ್ಬನನ್ನು ಕಾರಿನಲ್ಲಿ ಅಪಹರಿಸಿದ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಬಾರಕೂರು ಸಮೀಪ ಅ.29ರ ರಾತ್ರಿ 9:30ರ ಸುಮಾರಿಗೆ ನಡೆದಿದೆ.
ಹಂದಾಡಿ ಗ್ರಾಮದ ನಿತಿನ್ (26) ಹಲ್ಲೆಗೊಳಗಾದ ಯುವಕ. ನಿತನ್ ಅವರು ರಾತ್ರಿ ಬಾರಕೂರಿನಲ್ಲಿದ್ದಾಗ ಒಂದನೇ ಆರೋಪಿ ಸಂಪತ್ ಎಂಬಾತ ಮೊಬೈಲ್‌ಗೆ ಕರೆ ಮಾಡಿ ಎಲ್ಲಿದ್ದಾಗಿ ವಿಚಾರಿಸಿದ್ದ. ಸ್ವಲ್ಪ ಸಮಯದ ಬಳಿಕ ಸಂಪತ್ ಅವರು ಅಭಿಷೇಕ್ ಪಾಲನ್, ರಕ್ಷತ್, ಸನತ್ ಹಾಗೂ ಚೇತನ್ ಎಂಬವರೊಂದಿಗೆ ಬೈಕ್ ಹಾಗೂ ಕಾರಿನಲ್ಲಿ ಬಂದು, ಎಲ್ಲರೂ ಸೇರಿ ನಿತನ್‌ನ್ನು ಕಾರಿನಲ್ಲಿ ಎಳೆದು ಕೂರಿಸಿಕೊಂಡು ಬ್ರಹ್ಮಾವರದತ್ತ ಕರೆದುಕೊಂಡು ಹೋಗಿದ್ದರು.
ಎಲ್ಲರೂ ನಿತಿನ್‌ನ್ನು ಹೇರೂರು ಗ್ರಾಮದ ಕೆಇಬಿ ಬಳಿ ಇರುವ ಮೈದಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರನ್ನು ಕೆಳಗಿಸಿ ಕಾರಿನಲ್ಲಿದ್ದ ಮಾರಕಾಯುಧ ಗಳಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
ಈ ವೇಳೆ ನಿತನ್‌ರ ಬೊಬ್ಬೆ ಕೇಳಿ ಆಸುಪಾಸಿನ ಜನರು ಅಲ್ಲಿಗೆ ಬರುವುದನ್ನು ಕಂಡ ಆರೋಪಿಗಳು ನಿತಿನ್‌ನ್ನು ಪುನಹ ಕಾರಿನಲ್ಲಿ ತುಂಬಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾರಕೂರು ಸೇತುವೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಈ ಬಗ್ಗೆ ನಿತಿನ್ ಬ್ರಹ್ಮಾವರ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.







