ಸರಕಾರಿ ನೌಕರರ ಸಂಘದಿಂದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಿಗೆ ಮನವಿ

ಉಡುಪಿ, ನ.1: ವೈದ್ಯಕೀಯ ವಲಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ವಿವಿಧ ಆಸ್ಪತ್ರೆ ಗಳು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಸಕ್ಷಮ ಪ್ರಾಧಿಕಾರದ ಮೂಲಕ ನೋಂದಣಿ ಮಾಡಿಕೊಳ್ಳುವುದರೊಂದಿಗೆ ನೌಕರ ವರ್ಗದವರಿಗೆ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರಿಗೆ ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಕರ್ನಾಟಕ ರಾಜ್ಯ ಸರಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಯನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಪರಿಶೀಲಿಸಿ, ಸೂಕ್ತ ಒಪ್ಪಂದ ವ್ಯಕ್ತಪಡಿಸುವ ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಯಡಿ ನೋಂದಾಯಿಸಲು ಆದೇಶಿಸಲಾಗಿದೆ.
ಜಿಲ್ಲೆಯ ಎರಡು ಆಸ್ಪತ್ರೆಗಳು ಮಾತ್ರ ಈವರೆಗೆ ನೋಂದಣಿಗೊಂಡಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ರೋಗಿಗಳಿಗೆ ಆದ್ಯತೆಯ ಆಸ್ಪತ್ರೆಗಳಾಗಿರುವ ಉಡುಪಿ ಜಿಲ್ಲೆಯ ಹಲವು ಆಸ್ಪತ್ರೆಗಳ ನೋಂದಣಿ ಇಲ್ಲದಿರುವುದು ಈ ಭಾಗದ ಸರಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ನಿರಾಸೆ ಉಂಟು ಮಾಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಆದರ್ಶ ಆಸ್ಪತ್ರೆ, ಹೈಟೆಕ್ ಆಸ್ಪತ್ರೆ, ಸಿಟಿ ಹಾಸ್ಪಿಟಲ್, ಪ್ರಸಾದ್ ನೇತ್ರಾಲಯ, ಕುಂದಾಪುರದ ಚಿನ್ಮಯಿ ಆಸ್ಪತ್ರೆ ಸೇರಿದಂತೆ ಆಧುನಿಕ ವೈದ್ಯಕೀಯ ಸವಲತ್ತುಗಳನ್ನು ಹೊಂದಿರುವ ಜಿಲ್ಲಾ ವ್ಯಾಪ್ತಿಯ ಆಸ್ಪತ್ರೆಗಳು ನೋಂದಣಿಯಾದಲ್ಲಿ ಲಕ್ಷಾಂತರ ರಾಜ್ಯ ಸರಕಾರಿ ನೌಕರರು ಹಾಗೂ ಅವರ ಅವಲಂಬಿತರು ನಿರಾಂತಕವಾಗಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತಣ್ಣ, ಜಿಲ್ಲಾ ಖಜಾಂಜಿ ದಯಾನಂದ್ ಬೆನ್ನೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧಮೇರ್ಂದ್ರ ಎಸ್, ಸಂಘದ ನಿರ್ದೇಶಕ ಶ್ರೀಕಾಂತ್ ಹಾಗೂ ದೀಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಕಾಪು ತಾಲೂಕು ಅಧ್ಯಕ್ಷ ಬಸವರಾಜ್, ನಿರ್ದೇಶಕ ಅಚ್ಚುತ ಭಟ್ ಉಪಸ್ಥಿತರಿದ್ದರು.







