ಉಡುಪಿ: ವಿಶ್ವ ಪಾರ್ಶ್ವವಾಯು ದಿನಾಚರಣೆ
ಉಡುಪಿ, ನ.1: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ, ಸರಕಾರಿ ಪದವಿ ಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ ಬೋರ್ಡ್ ಹೈಸ್ಕೂಲಿನಲ್ಲಿ ನಡೆದ ವಿಶ್ವ ಪಾರ್ಶ್ವವಾಯು ದಿನಾಚರಣೆಯನ್ನು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್ ಉದ್ಘಾಟಿಸಿದರು.
ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅಖಿಲ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಪಾರ್ಶ್ವವಾಯು ಮುನ್ಸೂಚನೆಗಳ ಬಗ್ಗೆ ಮಾಹಿತಿ ನೀಡಿದರು. ಪಾರ್ಶ್ವವಾಯು ಸಂಭವಿಸಿದಾಗ ‘ಗೋಲ್ಡನ್ ಅವರ್’ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದಾಗ ವ್ಯಕ್ತಿಯು ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂದ ಅವರು ಇಂತಹ ಸಂದರ್ಭಗಳಲ್ಲಿ ಪ್ರತಿ ನಿಮಿಷವೂ ಅಮೂಲ್ಯವಾಗಿರುತ್ತದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕಿ ಅರ್ಪಿತಾ ಲಭ್ಯವಿರುವ ಸೇವಾಸೌಲಭ್ಯಗಳ ಬಗ್ಗೆ ವಿವರಿಸಿದರು.
ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಜಾಗೃತಿ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಘೋಷ ವಾಕ್ಯ ಬರವಣಿಗೆ ಸ್ಪರ್ಧಾ ವಿಜೇತರಿಗೆ ಮತ್ತು ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ಕ್ಲಿನಿಕಲ್ ಸೈಕಾಲಜಿಸ್ಟ್ ಹರ್ಷಲ್,ನಗರ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಶಾಂತಿ ಉಪಸ್ಥಿತರಿದ್ದರು.







